Home Uncategorized ಎಕ್ಸ್‌ಪ್ರೆಸ್‌ವೇನಲ್ಲಿ ಲಾರಿಗೆ ಕಾರು ಡಿಕ್ಕಿ ಇಬ್ಬರು ಸಾವು,ನಾಲ್ವರು ಗಂಭೀರ

ಎಕ್ಸ್‌ಪ್ರೆಸ್‌ವೇನಲ್ಲಿ ಲಾರಿಗೆ ಕಾರು ಡಿಕ್ಕಿ ಇಬ್ಬರು ಸಾವು,ನಾಲ್ವರು ಗಂಭೀರ

ಮಂಡ್ಯ,ನ.೨೪-ಮುಂದೆ ಸಾಗುತ್ತಿದ್ದ ಸರಕು ಸಾಗಣೆ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇನ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗೇಟ್ ಬಳಿಯ ಫ್ಲೈಓವರ್ ಬಳಿ ನಡೆದಿದೆ.
ಮಂಡ್ಯದ ಗುತ್ತಲು ಬಡಾವಣೆಯ ಮಹದೇವು (೪೯) ಹಾಗೂ ಮಂಡ್ಯ ಜಿಲ್ಲೆಯ ತೈಲೂರು ಗ್ರಾಮದ ರಿತ್ವಿಕಾ (೮) ಮೃತಪಟ್ಟವರು.
ಕುಟುಂಬದ ಸದಸ್ಯರು ಕಾರಿನಲ್ಲಿ ನಂಜನಗೂಡಿನ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ನಗುವಿನಹಳ್ಳಿ ಗೇಟ್ ಬಳಿಯ ಫ್ಲೈಓವರ್ ಮೇಲೆ ಮುಂದೆ ಹೋಗುತ್ತಿದ್ದ ಸರಕು ಸಾಗಣೆ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮಹದೇವು ಹಾಗೂ ಬಾಲಕಿ ರಿತ್ವಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ವಾಹನ ಸಂಪೂರ್ಣ ಜಖಂಗೊಂಡಿದೆ.
ಅಪಘಾತದಲ್ಲಿ ಗೌರಿ, ಲತಾ, ಶಿವರಾಜು ಹಾಗೂ ಪ್ರಾರ್ಥನಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳ ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಸ್ಟೇಟಸ್ ಹಾಕಿದ್ದ ಕುಟುಂಬ:
ನಂಜನಗೂಡಿನ ದೇವಸ್ಥಾನಕ್ಕೆ ತೆರಳುತ್ತಿದ್ದ ಕುಟುಂಬದ ಸದಸ್ಯರು ಅಪಘಾತಕ್ಕೂ ಮುನ್ನ ಕಾರಿನಲ್ಲೇ ರೀಲ್ಸ್ ಮಾಡಿದ್ದರು ಎನ್ನಲಾಗಿದೆ. ಈ ವಿಡಿಯೋವನ್ನು ವಾಟ್ಸ್‌ಆ?ಯಪ್ ಸ್ಟೇಟಸ್‌ನಲ್ಲಿಯೂ ಹಂಚಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಕೆಲವೇ ಸಮಯದಲ್ಲಿ ಕುಟುಂಬದ ಸಂಭ್ರಮದ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿರುವುದು ಸಂಬಂಧಿಕರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರು ಚಾಲಕನ ನಿಯಂತ್ರಣ ತಪ್ಪಲು ಕಾರಣವೇನು ಹಾಗೂ ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.