Home ಜಿಲ್ಲೆ ಬೆಂಗಳೂರು ಸತೀಶ್ ಭಾಮೈದ ಮಂಜುನಾಥ್ ವಿರುದ್ಧ ಬಲವಂತದ ಕ್ರಮ ಬೇಡ

ಸತೀಶ್ ಭಾಮೈದ ಮಂಜುನಾಥ್ ವಿರುದ್ಧ ಬಲವಂತದ ಕ್ರಮ ಬೇಡ

ಬೆಂಗಳೂರು,ಜು.೧೬- ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭಾಮೈದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ್ ಸೇರಿ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಶೋಧ ಮತ್ತು ಜಪ್ತಿ ಸಂಬಂಧಿತ ಪ್ರಕ್ರಿಯೆ ಕುರಿತಂತೆ ಬಲವಂತದ ಕ್ರಮ ಕೈಗೊಳ್ಳದಂತೆ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.


ಕಳೆದ ಜೂನ್ ೨೩ರಂದು ಬೆಂಗಳೂರು ಮತ್ತು ಗೋವಾದ ಇಡಿ ಅಧಿಕಾರಿಗಳು ಬೆಳಗಾವಿ ಸೇರಿದಂತೆ ಅರ್ಜಿದಾರರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ನಡೆಸಿರುವ ಶೋಧ ಮತ್ತು ಜಪ್ತಿ ಪ್ರಶ್ನಿಸಿ ಡಾ.ಮಂಜುನಾಥ್ ಮತ್ತು ಅವರ ಸಂಬಂಧಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.


ಅಲ್ಲದೇ, ಇ.ಡಿ ಭ್ರಷ್ಟಾಚಾರದ ವಿರುದ್ಧ ಸಮರ ಸೇನಾನಿಯಾಗಿರಬಹುದು. ಆದರೆ, ಕಾನೂನಿನ ಅನ್ವಯ ನಡೆಯಬೇಕು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉತ್ಸಾಹ ಇದ್ದರೆ ಕಾನೂನಿನ ಪ್ರಕಾರ ಕ್ರಮಕ್ಕೆ ಮುಂದಾಗಬೇಕು. ಆಗ ಯಾವುದೇ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪೀಠ ತಿಳಿಸಿತು.


ಜಾರಿ ನಿರ್ದೇಶನಾಲಯವು ಹಾಲಿ ಪ್ರಕರಣದಲ್ಲಿ ಮುಂದಿನ ವಿಚಾರಣೆಯವರೆಗೆ ಮುಂದುವರೆಯಬಾರದು ಎಂದು ನಿರ್ದೇಶಿಸಿದ್ದು, ವಿಚಾರಣೆಯನ್ನು ಜುಲೈ ೨೨ಕ್ಕೆ ಮುಂದೂಡಿದೆ.


ಇದಕ್ಕೂ ಮುನ್ನ ನಡೆದ ವಿಚಾರಣೆಯ ವೇಳೆ, ಹಣ ವರ್ಗಾವಣೆಯಾಗಿರಬೇಕು, ಸಂಪರ್ಕ ಕಾಣಬೇಕು. ಇಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಗಳಿದ್ದಾರೆ. ಅಷ್ಟು ಸರಳವಾಗಿ ನೀವು ಅವರನ್ನು ಸಿಲುಕಿಸಲಾಗದು. ಯಾರ ಮನೆಯನ್ನಾದರೂ ಇ.ಡಿ ಶೋಧಿಸಬಹುದು. ಆದರೆ, ಅದಕ್ಕೆ ಸಂಬಂಧಿಸಿದಂತೆ ಅಪರಾಧದ ಪೂರ್ವಾಪರ ಇರಬೇಕು. ಆ ಪ್ರಕರಣದಲ್ಲಿ ವ್ಯಕ್ತಿ ಆರೋಪಿಯಾಗಿರಬೇಕು, ಇಲ್ಲವೇ ಆ ವ್ಯಕ್ತಿಯನ್ನು ಸಂಪರ್ಕಿಸುವ ಹಣ ವರ್ಗಾವಣೆಯಾಗಿರಬೇಕು ಎಂದು ತಿಳಿಸಿದ ಪೀಠ, ಪ್ರಕರಣದಲ್ಲಿರುವ ವ್ಯಕ್ತಿಗಳು ಯಾರು. ಅವರಿಗೂ, ಪ್ರಕರಣಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿತು.


೨೫ ಲಕ್ಷ ರೂಗಳನ್ನು ಲಂಚ ಪಡೆಯುವ ಸಂದರ್ಭದಲ್ಲಿ ಸಿಕ್ಕಿಬಿದ್ದಿರುವುದು ಅಪರಾಧ ಪ್ರಕ್ರಿಯೆಯಾಗುತ್ತದೆಯೇ ಲಂಚ ಪಡೆದ ವ್ಯಕ್ತಿಯ ವಿರುದ್ಧ ಇಡಿ ಮುಂದುವರೆಯಬಹುದು. ಇದಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳ ವಿರುದ್ಧ ಹೇಗೆ ಇಡಿ ವಿಚಾರಣೆ ನಡೆಸಬಹುದು? ಎಂದು ಮರುಪ್ರಶ್ನೆ ಮಾಡಿತು. ಅರ್ಜಿದಾರರ ಪರ ವಕೀಲರು, ಈ ಪ್ರಕರಣದಲ್ಲಿ ಅಪರಾಧದ ಪೂರ್ವಪರವಾಗಿ ಏನೂ ಇಲ್ಲ. ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟಣೆಯು ಪಿಎಂಎಲ್‌ಎ ಅಡಿ ವ್ಯಾಪ್ತಿಗೆ ಒಳಪಡುವುದಿಲ್ಲ. ಅರ್ಜಿದಾರರ ಕಚೇರಿ ಮತ್ತು ಮನೆಗಳಲ್ಲಿ ಶೋಧ ಮತ್ತು ಜಪ್ತಿ ನಡೆದಿದೆ. ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ಬಂಧಿಸಬೇಕು ಎಂದು ಕೋರಿದರು.


ಜಾರಿ ನಿರ್ದೇಶನಾಲಯದ ಪರ ವಕೀಲರು, ತನಿಖೆಯ ಸಂದರ್ಭದಲ್ಲಿ ಪತ್ತೆಯಾದ ಅಂಶಗಳ ಆಧಾರದಲ್ಲಿ ಇ.ಡಿ ಕ್ರಮ ಕೈಗೊಂಡಿದೆ. ಈ ಸಂಬಂಧ ಮಾಹಿತಿ ಪಡೆಯಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.


ಅರ್ಜಿಯ ವಿವರ:
ಇಡಿ ದಾಳಿ ಮತ್ತು ಶೋಧ ನಡೆಸಿರುವ ಕ್ರಮವನ್ನು ಪ್ರಶ್ನಿಸಿರುವ ಅರ್ಜಿದಾರರು, ತಮ್ಮ ವಿರುದ್ಧ ನಿಗದಿತ ಅಪರಾಧವಿಲ್ಲ. ಆದರೂ ಇ.ಡಿ ಅಧಿಕಾರಿಗಳು ಪಿಎಂಎಲ್‌ಎ ಸೆಕ್ಷನ್ ೧೭ರ ಅಡಿ ಆರಂಭಿಸಿರುವ ಪ್ರಕ್ರಿಯೆಯನ್ನು ವಜಾಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.


ಜಗದೀಶ್ ನಾಯಕ್ ಎಂಬ ವ್ಯಕ್ತಿಯು ೨೫ ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಇದರ ಭಾಗವಾಗಿ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ ೭ಎ ಅಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ತಾವು ಆರೋಪಿಗಳೂ ಅಲ್ಲ, ಅದಕ್ಕೆ ಸಂಬಂಧವನ್ನೂ ಹೊಂದಿಲ್ಲ. ಅದಾಗ್ಯೂ, ಇದನ್ನು ಜಾರಿ ನಿರ್ದೇಶನಾಲಯವು ಅಪರಾಧ ಪ್ರಕ್ರಿಯೆಯಾಗಿ ಮುಂದು ಮಾಡುತ್ತಿರುವುದು ಸರಿಯಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.