Home ಜಿಲ್ಲೆ ಬೆಂಗಳೂರು ತುರ್ತು ಜಂಟಿ ಸಭೆ ಸರ್ವೀಸ್ ರಸ್ತೆ ಕಾಮಗಾರಿ ಆರಂಭಿಸಿ

ತುರ್ತು ಜಂಟಿ ಸಭೆ ಸರ್ವೀಸ್ ರಸ್ತೆ ಕಾಮಗಾರಿ ಆರಂಭಿಸಿ

?????????????

ಮಾಲೂರು.ಜೂ೮: ನಗರದಲ್ಲಿ ಪ್ರಗತಿಯಲ್ಲಿರುವ ಮೇಲ್ಸೇತುವೆ ಕಾಮಗಾರಿಯಿಂದ ಪಟ್ಟಣದಲ್ಲಿ ಸಂಚಾರ ದಟ್ಟಣೆ ತಪ್ಪಲಿದ್ದು, ಸಂಚಾರ ದಟ್ಟಣೆ ತಪ್ಪಿಸಲು ಸೋಮವಾರದಿಂದಲೇ ಸುಸಜ್ಜಿತ ಸರ್ವೀಸ್ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು.


ಮೇಲ್ಸೇತುವೆ ಕಾಮಗಾರಿ ಕೆಲಸ ಪ್ರಗತಿಯಲ್ಲಿರುವುದರಿಂದ ಪ್ರತಿದಿನ ಶಾಲಾ-ಕಾಲೇಜು ಮಕ್ಕಳು, ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಶಾಸಕರು ಅಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದರು.


ಮಾಲೂರು ನಗರ ವ್ಯಾಪ್ತಿಯಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವ ಜಾಗದಲ್ಲಿ ಪ್ರತಿನಿತ್ಯ ಸುಮಾರು ೧೫ ರಿಂದ ೧೬ ಸಾವಿರ ವಾಹನಗಳು ಸಂಚರಿಸುತ್ತಿವೆ. ಆದರೆ, ಸರ್ವೀಸ್ ರಸ್ತೆ ಕಿರಿದಾಗಿರುವುದರಿಂದ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಹೀಗಾಗಿ ಕೂಡಲೇ ಸರ್ವಿಸ್ ರಸ್ತೆಯನ್ನು ಸವಾರರಿಗೆ ಮುಕ್ತಗೊಳಿಸಬೇಕು ಎಂದು ಸೂಚಿಸಿದ್ದಾರೆ. ಇದರೊಂದಿಗೆ ಮೇಲ್ಸೇತುವೆ ಕಾಮಗಾರಿಯನ್ನು ಚುರುಕುಗೊಳಿಸುವುದರ ಜೊತೆಗೆ, ಸೋಮವಾರದಿಂದಲೇ ಸರ್ವಿಸ್ ರಸ್ತೆ ವಿಸ್ತರಣೆ ಮತ್ತು ದುರಸ್ತಿ ಕಾರ್ಯವನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕೆಂದು ಕಾಮಗಾರಿ ಅನುಷ್ಠಾನ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆನೀಡಿದರು.


ಮಾಲೂರು ನಗರದ ಸ್ಥಳೀಯ ವರ್ತಕರು ಮತ್ತು ಸಾರ್ವಜನಿಕರ ಹಿತರಕ್ಷಣೆಗಾಗಿ ಪ್ರಮುಖ ವಾಣಿಜ್ಯ ಸಂಕೀರ್ಣಗಳು ಮತ್ತು ಅಂಗಡಿ ಮುಂಗಟ್ಟುಗಳು ಧ್ವಂಸವಾಗುವುದನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ತಪ್ಪಿಸಲಾಗಿದೆ. ಆದರೆ, ಸರ್ವಿಸ್ ರಸ್ತೆ ಸುಗಮವಾಗಿ ನಿರ್ಮಾಣವಾಗಬೇಕಾದರೆ ರಸ್ತೆಯ ಮುಂದೆ ಚಾಚಿಕೊಂಡಿರುವ ಸಣ್ಣಪುಟ್ಟ ಮೆಟ್ಟಿಲುಗಳು ಹಾಗೂ ತಾತ್ಕಾಲಿಕ ಒತ್ತುವರಿ ತೆರವುಗೊಳಿಸಬೇಕು ಎಂದು ಕೋರಿದರು.


ಸೋಮವಾರದಿಂದ ನಗರಸಭೆ, ಪೊಲೀಸ್ ಇಲಾಖೆ ಹಾಗೂ ಯೋಜನಾ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸಣ್ಣಪುಟ್ಟ ಅಡೆತಡೆಗಳನ್ನು ತೆರವುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸಾರ್ವಜನಿಕರು ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಈ ಅಭಿವೃದ್ಧಿ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ನಂಜೇಗೌಡರು ಕೋರಿದರು.


ಸರ್ವಿಸ್ ರಸ್ತೆ ಪೂರ್ಣಗೊಂಡರೆ ಸಾರ್ವಜನಿಕರ ದಿನನಿತ್ಯದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದ್ದು, ಪಟ್ಟಣದ ಸುಗಮ ಸಂಚಾರಕ್ಕೆ ಎಲ್ಲರೂ ಒಟ್ಟಾಗಿ ಸಹಕರಿಸಬೇಕು. ಅಕಾರಿಗಳು ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕೆಂದು ಹೇಳಿದರು.


ಸಭೆಯಲ್ಲಿ ಮೇಲ್ಸೇತುವೆ ಯೋಜನಾ ಅಕಾರಿಗಳು, ಕೆ.ಶಿಪ್ ಗುತ್ತಿಗೆದಾರರು. ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪ ಗುತ್ತೇರ, ಯೋಜನಾ ಪ್ರಾಕಾರದ ಅಧ್ಯಕ್ಷ ವಿಜಯ ನರಸಿಂಹ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಎಂ ಕೃಷ್ಣಪ್ಪ ಕಿಟ್ಟಿ, ನಗರಸಭಾ ಮಾಜಿ ಸದಸ್ಯ ಎನ್.ವಿ. ಮುರಳಿಧರ್, ಇಮ್ತಿಯಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹೇಮಮಾಲಿನಿ ಸಿ. ನಾರಾಯಣಸ್ವಾಮಿ, ನಗರ ಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ರಾಜಣ್ಣ, ಇಂಜಿನಿಯರ್ ನಾಗರಾಜ್, ಎಂಪಿವಿ ಮಂಜು, ಚಂದ್ರಶೇಖರ್ ಯಾದವ್, ನಾಗಪುರ ನವೀನ್, ಮುದಾಸಿರ್, ನಗರಸಭೆ ಅಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿದಂತೆ ಪ್ರಮುಖ ಇಲಾಖೆಗಳ ಅಕಾರಿಗಳು ಭಾಗಿಯಾಗಿದ್ದರು.