Home Lead News ೧೦೧ ತಾಲ್ಲೂಕುಗಳಲ್ಲಿ ಬರ

೧೦೧ ತಾಲ್ಲೂಕುಗಳಲ್ಲಿ ಬರ

ಬೆಂಗಳೂರು, ಆ. ೨೭- ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ೧೦೧ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.


ವಿಧಾನಸೌಧದಲ್ಲಿಂದು ಸುದ್ಧಿಗೋಷ್ಠಿಯಲ್ಲಿ ರಾಜ್ಯ ಬರಪರಿಸ್ಥಿತಿ ಮಳೆ ಕೊರತೆ ಎಲ್ಲದರ ಬಗ್ಗೆಯೂ ವಿವರ ನೀಡಿದ್ದ ಉಪಮುಖ್ಯಮಂತ್ರಿ, ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯದಲ್ಲಿ ಮಳೆ ಕೊರತೆಯಾಗಿ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಮೊದಲ ಹಂತದಲ್ಲಿ ೧೦೧ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದೇವೆ ಎಂದರು.


ಇವುಗಳಲ್ಲಿ ೮೯ ತಾಲ್ಲೂಕುಗಳಲ್ಲಿ ತೀವ್ರ ಬರ ಹಾಗೂ ೧೨ ತಾಲ್ಲೂಕುಗಳಲ್ಲಿ ಸಾಧಾರಣ ಬರ ಇದೆ. ಪ್ರತಿ ೧೫ ದಿನಕ್ಕೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸಿ ಬರ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಜ್ಜಾಗಿದೆ. ಈ ಭಾರೀ ಮಳೆ ಕೊರೆತೆಯಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಿದರು.


ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಶೇ. ೪೧, ಮಲೆನಾಡಿನಲ್ಲಿ ಶೇ. ೩೫, ಉತ್ತರ ಒಳನಾಡಿನಲ್ಲಿ ಶೇ. ೩೧, ಕರಾವಳಿ ಭಾಗದಲ್ಲಿ ಶೇ. ೨೪ ರಷ್ಟು ಮಳೆ ಕೊರತೆಯಾಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ರಾಜ್ಯದ ೨೦೬೯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ೭೫೮ ಗ್ರಾಮಗಳಿಗೆ ೧೪೯ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದರು.


ಕೇಂದ್ರಕ್ಕೆ ಮನವಿ
ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವಂತೆ ಕೋರಲಾಗುವುದು ಎಂದರು.


ರಾಜ್ಯದ ೨೯ ಜಿಲ್ಲೆಗಳ ೧೯೦ ತಾಲ್ಲೂಕುಗಳು ಮಳೆ ಕೊರತೆ ಮತ್ತು ತೀವ್ರ ಮಳೆ ಕೊರತೆಯ ವ್ಯಾಪ್ತಿಯಲ್ಲಿದ್ದು, ೧೨ ತಾಲ್ಲೂಕುಗಳು ಅತ್ಯಂತ ಭೀಕರ ಮಳೆ ಅಭಾವವನ್ನು ಎದುರಿಸುತ್ತಿವೆ. ಆಗಸ್ಟ್ ೨೬ರ ವೇಳೆಗೆ ಸತತ ೩ ಅಥವಾ ಅದಕ್ಕಿಂತ ಹೆಚ್ಚು ವಾರಗಳ ಕಾಲ ಮಳೆಯಿಲ್ಲದೆ ಒಣಹವೆ ಅನುಭವಿಸಿದ ೧೩೪ ತಾಲ್ಲೂಕುಗಳು ಕೇಂದ್ರದ ’ಟ್ರಿಗರ್-೧’ ಮಾನದಂಡದಡಿ ಮೌಲ್ಯಮಾಪನಕ್ಕೆ ಅರ್ಹತೆ ಪಡೆದಿವೆ.


ಬರ ಘೋಷಣೆಯ ಮಾನದಂಡ ಮತ್ತು ತಾಲ್ಲೂಕುಗಳ ವಿಂಗಡಣೆ


ಕೇಂದ್ರ ಸರ್ಕಾರದ ಬರ ಕೈಪಿಡಿ – ೨೦೨೦ ನಿಯಮಾವಳಿಯಂತೆ ಬರ ಘೋಷಿಸಲು ಎರಡು ಪ್ರಮುಖ ಟ್ರಿಗರ್ ಪಾಯಿಂಟ್‌ಗಳ ಆಧಾರದಲ್ಲಿ ’ಗ್ರೌಂಡ್ ಟ್ರೂಥಿಂಗ್’ (ಸ್ಥಳ ಪರಿಶೀಲನೆ) ನಡೆಸಲಾಗಿದೆ ಎಂದು ತಿಳಿದರು.


ಪರಿಶೀಲನೆಯಲ್ಲಿರುವ ಬಾಕಿ ತಾಲ್ಲೂಕುಗಳು ೩೨
ಪ್ರತಿ ೧೫ ದಿನಗಳಿಗೊಮ್ಮೆ ಸಮಗ್ರ ಬರ ಮೌಲ್ಯಮಾಪನ ನಡೆಯುತ್ತಿದ್ದು, ಬಾಕಿ ಇರುವ ೩೨ ತಾಲ್ಲೂಕುಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬರಪೀಡಿತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಉಪಮುಖ್ಯ ಮಂತ್ರಿ ಡಾ,ಪರಮೇಶ್ವರ್ ತಿಳಿಸಿದರು.


ಕೇಂದ್ರದ ಕೈ ಪಿಡಿಯಲ್ಲಿರುವ ಕೆಲ ತೊಡಕುಗಳಿಂದಾಗಿ ಬರ ಘೋಷಣೆಗೆ ತೊಡಕಾಗುತ್ತಿದ್ದು, ನಿಯಮ ತಿದ್ದುಪಡಿಗೆ ಕೇಂದ್ರವನ್ನು ಒತ್ತಾಯಿಸಲಾಗುತ್ತಿದೆ.ರಾಜ್ಯದಲ್ಲಿ ಆಗಸ್ಟ್ ೨೧ ರವರೆಗಿನ ಅಂಕಿಅಂಶಗಳಂತೆ ೮೪.೧೦ ಲಕ್ಷ ಹೆಕ್ಟೇರ್ ಪೈಕಿ ಕೇವಲ ೬೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ (ಶೇ. ೭೧) ಮಾತ್ರ ಬಿತ್ತನೆಯಾಗಿದೆ
ಒಟ್ಟು ೨೪೦ ತಾಲ್ಲೂಕುಗಳ ಪೈಕಿ ೧೦೪ ತಾಲ್ಲೂಕುಗಳಲ್ಲಿ ಶೇ. ೭೫ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದರೆ, ೪೨ ತಾಲ್ಲೂಕುಗಳಲ್ಲಿ ಶೇ. ೨೫ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದೆ.


ಮೆಕ್ಕೆಜೋಳ (ಶೇ. ೮೪), ತೊಗರಿ (ಶೇ. ೮೯), ಭತ್ತ (ಶೇ. ೬೦), ರಾಗಿ (ಶೇ. ೫೭) ಮತ್ತು ಶೇಂಗಾ (ಶೇ. ೩೪).
೪.೩೬ ಲಕ್ಷ ಹೆಕ್ಟೇರ್ ಪೈಕಿ ೩.೦೪ ಲಕ್ಷ ಹೆಕ್ಟೇರ್‌ಗಳಲ್ಲಿ (ಶೇ. ೬೯) ಮಾತ್ರ ಬಿತ್ತನೆಯಾಗಿದೆ.


ಮಳೆಯ ಅಭಾವದಿಂದಾಗಿ ೧೭೮ ತಾಲ್ಲೂಕುಗಳಲ್ಲಿ ಮಣ್ಣಿನ ತೇವಾಂಶ ತೀವ್ರವಾಗಿ ಕುಸಿದಿದ್ದು, ೧೬೫ ತಾಲ್ಲೂಕುಗಳಲ್ಲಿ ಸಸ್ಯವರ್ಗಗಳು ಒಣಗುತ್ತಿರುವುದು ಉಪಗ್ರಹ ಸಮೀಕ್ಷೆಯಿಂದ ದೃಢಪಟ್ಟಿದೆ. ಭಾರತೀಯ ಮತ್ತು ಜಾಗತಿಕ ಹವಾಮಾನ ಸಂಸ್ಥೆಗಳ ಮುನ್ಸೂಚನೆಯಂತೆ ನೈಋತ್ಯ ಮುಂಗಾರಿನ ದ್ವಿತೀಯಾರ್ಧದಲ್ಲೂ (ಆಗಸ್ಟ್-ಸೆಪ್ಟೆಂಬರ್) ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ತಿಳಿಸಿದರು.


ನೀರು, ಅಂತರ್ಜಲ ಮತ್ತು ಮೇವಿನ ಸ್ಥಿತಿಗತಿ
ಕುಡಿಯುವ ನೀರು ಸರಬರಾಜು: ರಾಜ್ಯದ ೭೫೮ ಗ್ರಾಮಗಳಿಗೆ ೧೪೯ ಟ್ಯಾಂಕರ್‌ಗಳು ಹಾಗೂ ೭೧೪ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ನೀಡಲಾಗುತ್ತಿದೆ. ನಗರ ಪ್ರದೇಶದ ೧೮ ಸ್ಥಳೀಯ ಸಂಸ್ಥೆಗಳ ೧೧೪ ವಾರ್ಡ್‌ಗಳಿಗೆ ೪೮ ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ. ಮುಂದಿನ ಬೇಸಿಗೆಯಲ್ಲಿ ೨,೦೫೯ ಗ್ರಾಮ ಪಂಚಾಯತಿಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.


ಕಳೆದ ವರ್ಷ ಈ ವೇಳೆಗೆ ೮೧೫.೭೦ ಟಿಎಂಸಿ ನೀರಿತ್ತು. ಈ ವರ್ಷ ಕೇವಲ ೬೮೪.೦೯ ಟಿಎಂಸಿ ನೀರು ಸಂಗ್ರಹವಾಗಿದೆ. ೧೩೨ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಭೀಕರವಾಗಿ ಕುಸಿದಿದೆ. ಪ್ರಸ್ತುತ ೧೫೧ ಲಕ್ಷ ಟನ್ ಮೇವು ಲಭ್ಯವಿದ್ದು, ೩೩ ವಾರಗಳಿಗೆ ಸಾಕಾಗಲಿದೆ. ಆದರೆ ೧೮ ತಾಲ್ಲೂಕುಗಳಲ್ಲಿ ೨೦ ವಾರಗಳಿಗಿಂತ ಕಡಿಮೆ ಮೇವಿದೆ. ಮೇವು ಬೆಳೆಯಲು ರೈತರಿಗೆ ಕಿಟ್‌ಗಳನ್ನು ನೀಡಲು ಸರ್ಕಾರ ೨೫ ಕೋಟಿ ರೂ. ಬಿಡುಗಡೆ ಮಾಡಿದೆ.


ಸರ್ಕಾರದ ಪರಿಹಾರ ಕಾಯಾಚರಣೆ ಮತ್ತು ಅನುದಾನ
ಅನುದಾನ ಬಿಡುಗಡೆ: ಕುಡಿಯುವ ನೀರಿನ ಪೂರೈಕೆಗಾಗಿ ೩೧ ಜಿಲ್ಲೆಗಳಿಗೆ ೧೧೭ ಕೋಟಿ ರೂ. ಮತ್ತು ೧೮೯ ಗ್ರಾಮೀಣ ಕ್ಷೇತ್ರಗಳಿಗೆ ತಲಾ ೧ ಕೋಟಿ ರೂ. ನಂತೆ ಒಟ್ಟು ೩೦೬ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬರ ಎದುರಿಸಲು ಹಣದ ಕೊರತೆಯಿಲ್ಲ.


ದಾಖಲೆ ಮಟ್ಟದ ೪೯ ಲಕ್ಷ ರೈತರು ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಮಳೆ ಅಭಾವದಿಂದ ಬಿತ್ತನೆ ಮಾಡಲು ಯವಾಗದ ರೈತರಿಗೆ ಕ್ಯಾಟಗರಿಯಡಿ ಪರಿಹಾರ ಪಡೆಯಲು ಅವಕಾಶವಿದ್ದು, ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ಆಗಸ್ಟ್ ೩೧ರವರೆಗೆ ವಿಸ್ತರಿಸಲಾಗಿದೆ. ಗುಳೆ ಹೋಗುವುದನ್ನು ತಡೆಯಲು ವಿಬಿ ಜಿ ರಾಮ್ ಜಿ ಯೋಜನೆಯಡಿ ೧೬,೪೬೦ ಕಾಮಗಾರಿಗಳನ್ನು ಕೈಗೆತ್ತಿಕೊಂಡು ೬೬.೭೩ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಮಾಹಿತಿ ನೀಡಿದರು,


೧೮೭೬-೭೮ರ ಭೀಕರ ಬರಗಾಲದಲ್ಲಿ ಬ್ರಿಟಿಷರು ಇಲ್ಲಿನ ಆಹಾರ ಧಾನ್ಯಗಳನ್ನು ಒಯ್ದಿದ್ದರಿಂದ ಭಾರತದಲ್ಲಿ ಸುಮಾರು ೬೦ ಲಕ್ಷದಿಂದ ೧ ಕೋಟಿ ಜನರು ಮೃತಪಟ್ಟಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ನಾಗರಿಕ ಸರ್ಕಾರಗಳಿರುವುದರಿಂದ ಜನ ಮತ್ತು ಜಾನುವಾರುಗಳ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ದಕ್ಷಿಣ ಭಾರತದಾದ್ಯಂತ ಮಳೆ ಕೊರತೆ ಇರುವುದರಿಂದ ನೀರಿನ ಆಸರೆ ಇರುವ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೇವು ಬೆಳೆಯಬೇಕೆಂದು ಸರ್ಕಾರ ಮನವಿ ಮಾಡಿದೆ.
ಬರಪೀಡಿತ ತಾಲ್ಲೂಕುಗಳಿಗೆ ಎಸ್‌ಡಿಆರ್‌ಎಫ್ ನಿಧಿಯಿಂದ ತಕ್ಷಣ ಕುಡಿಯುವ ನೀರಿನ ವೆಚ್ಚ ಭರಿಸಲಾಗುವುದು ಹಾಗೂ ಕೇಂದ್ರ ಸರ್ಕಾರಕ್ಕೆ ಪರಿಹಾರ ಮನವಿ ಸಲ್ಲಿಸಿ ಮುಂದಿನ ಬೆಳೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.


ತೀವ್ರ ಬರ ಪೀಡಿತ ತಾಲೂಕುಗಳ ವಿವರ (ಒಟ್ಟು ೮೯)
ಬೆಂಗಳೂರು ನಗರ: ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಯಲಹಂಕ.ಬೆಂಗಳೂರು ಗ್ರಾಮಾಂತರ: ಹೊಸಕೋಟೆ, ನೆಲಮಂಗಲ. ಬೆಂಗಳೂರು ದಕ್ಷಿಣ: ಮಾಗಡಿ, ರಾಮನಗರ.ಕೋಲಾರ: ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆ.ಜಿ.ಎಫ್.ಚಿಕ್ಕಬಳ್ಳಾಪುರ: ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಚೆಲೂರು, ಮಂಚೇನಹಳ್ಳಿ. ತುಮಕೂರು:

ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಸಿರಾ, ತುಮಕೂರು, ತುರುವೇಕೆರೆ.ಚಿತ್ರದುರ್ಗ: ಚಳ್ಳಕೆರೆ, ಹಿರಿಯೂರು, ಹೊಸದುರ್ಗ. ದಾವಣಗೆರೆ: ಚನ್ನಗಿರಿ, ಹೊನ್ನಾಳಿ, ನ್ಯಾಮತಿ. ಚಾಮರಾಜನಗರ: ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು. ಮೈಸೂರು: ಹೆಗ್ಗಡದೇವನಕೋಟೆ, ಹುಣಸೂರು, ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಟಿ.ನರಸೀಪುರ, ಸರಗೂರು, ಸಾಲಿಗ್ರಾಮ. ಮಂಡ್ಯ: ಕೃಷ್ಣರಾಜಪೇಟೆ, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ. ಬಳ್ಳಾರಿ: ಬಳ್ಳಾರಿ, ಸಂಡೂರು, ಕುರುಗೋಡು, ಕಂಪ್ಲಿ.ಕೊಪ್ಪಳ: ಗಂಗಾವತಿ, ಕುಕನೂರು, ಕನಕಗಿರಿ. ರಾಯಚೂರು: ದೇವದುರ್ಗ, ಮಾಸ್ಕಿ, ಅರಕೇರಾ.ಬೀದರ್: ಬೀದರ್, ಬಸವಕಲ್ಯಾಣ, ಹುಮ್ನಾಬಾದ್, ಚಿಟ್ಟಗುಪ್ಪ. ಬಾಗಲಕೋಟೆ: ಬಾಗಲಕೋಟೆ, ಬೀಳಗಿ, ಜಮಖಂಡಿ, ಗುಳೇದಗುಡ್ಡ, ಇಳಕಲ್.


ವಿಜಯಪುರ: ವಿಜಯಪುರ, ನಿಡಗುಂದಿ, ಕೊಲ್ಹಾರ. ಗದಗ: ಗಜೇಂದ್ರಗಡ.ಹಾಸನ: ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ.ಚಿಕ್ಕಮಗಳೂರು: ಅಜ್ಜಂಪುರ.ಯಾದಗಿರಿ: ಶಹಾಪುರ.ವಿಜಯನಗರ: ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ.ಸಾಧಾರಣ ಬರ ಪೀಡಿತ ತಾಲೂಕುಗಳ ವಿವರ (ಒಟ್ಟು ೧೨)
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ.ದಾವಣಗೆರೆ: ದಾವಣಗೆರೆ.ಮಂಡ್ಯ: ಮದ್ದೂರು, ಪಾಂಡವಪುರ.
ರಾಯಚೂರು: ಲಿಂಗಸೂಗೂರು, ರಾಯಚೂರು.ಚಿಕ್ಕಮಗಳೂರು: ಕೊಪ್ಪ, ನರಸಿಂಹರಾಜಪುರ, ತರೀಕೆರೆ.ಕೊಡಗು: ಸೋಮವಾರಪೇಟೆ.ಉತ್ತರ ಕನ್ನಡ: ಮುಂಡಗೋಡು, ಯಲ್ಲಾಪುರ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ.

ರಾಜ್ಯದಲ್ಲಿ ಭೀಕರ ಬರ

  • ೮೯ ತೀವ್ರ ಬರಪೀಡಿತ ತಾಲ್ಲೂಕುಗಳು
  • ೧೨ ಸಾಧಾರಣ ಬರಪೀಡಿತ ತಾಲ್ಲೂಕುಗಳು
  • ೧೦೧ ತಾಲ್ಲೂಕುಗಳು ಬರಪೀಡಿತ