
ಕಲಬುರಗಿ,ಆ.27: ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಿದ ಮಹಾನ್ ಶಿಕ್ಷಣ ಹರಿಕಾರ ಎಂದು ನಿವೃತ್ತ ಪ್ರಾಚಾರ್ಯ ಪೆÇ್ರ.ಕೆ.ಎಸ್.ನಾಯಕ್ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮತ್ತು ಶಿಕ್ಷಣ ಸಂಸ್ಥೆಗಳು ಎಂಬ ವಿಷಯ ಕುರಿತು ಮಾತನಾಡಿದರು.
ಶರಣಬಸವೇಶ್ವರ ಸಂಸ್ಥಾನದ ದಾಸೋಹ ಪರಂಪರೆಯಲ್ಲಿ ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹಕ್ಕೂ ಮಹತ್ವ ನೀಡಲಾಯಿತು. 1934ರಲ್ಲಿ ಮಹಾದೇವಿ ಕನ್ಯಾ ಶಾಲೆಯನ್ನು ಕನ್ನಡ ಮಾಧ್ಯಮದಲ್ಲಿ ಆರಂಭಿಸುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮಹತ್ವದ ಹೆಜ್ಜೆ ಇಡಲಾಯಿತು. ಆ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣದ ಅವಕಾಶಗಳು ಸೀಮಿತವಾಗಿದ್ದ ಸಂದರ್ಭದಲ್ಲಿ ಇದು ಪ್ರಗತಿಪರ ಪ್ರಯತ್ನವಾಗಿತ್ತು.
ಲಿಂ.ಪರಮ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಆರಂಭಿಸಿದ ಶಿಕ್ಷಣ ಸಂಸ್ಥೆಗೆ ‘ ಸಂಜೀವಿನಿಯಾಗಿ’ ನಿಂತವರು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು. ಅಪಾರ ಜ್ಞಾನದ ಗಣಿಯಾಗಿದ್ದ ಡಾ.ಅಪ್ಪ ಅವರು ಶರಣಬಸವೇಶ್ವರರ ಆಶೀರ್ವಾದದಿಂದ ಶಿಕ್ಷಣ ಕ್ಷೇತ್ರದಲ್ಲಿ ಮುಗಿಲೆತ್ತರಕ್ಕೆ ಮುಟ್ಟಿದ ಮೇರು ಪರ್ವತರಾಗಿದ್ದರು.
ಕಲಬುರ್ಗಿಯ ಕರುನಾಡಿನಲ್ಲಿ ಶಿಕ್ಷಣವೆಂಬ ವಿವಿಧ ತಳಿಯ (ಕೋರ್ಸುಗಳು) ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸಿದ ಡಾ.ಅಪ್ಪ ಅವರು ಇಂದು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೆಲವೇ ವ್ಯಕ್ತಿಗಳಲ್ಲಿ ಇವರೊಬ್ಬ ಶಕ್ತಿಯಾಗಿ ಕಂಗೊಳಿಸುತ್ತಾರೆ. 42ಕ್ಕೂ ಹೆಚ್ಚು ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಕಲ್ಯಾಣ ಕರ್ನಾಟಕದ ಪ್ರಥಮ ಖಾಸಗಿ ‘ಶರಣಬಸವ’ ವಿಶ್ವವಿದ್ಯಾಲಯ ಸ್ಥಾಪಿಸಿ ಜಗತ್ತಿನ ಪ್ರಮುಖ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಹೆಜ್ಜೆ ಇಡುವಂತೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲ ಉತ್ತರ ಕರ್ನಾಟಕ ಪ್ರದೇಶದಲ್ಲಿ ಯಾರು ನೀಡದಂತ ಶಿಕ್ಷಣ ನೀಡಿ ಹೊಸ ಹೊಸ ಕೋರ್ಸುಗಳನ್ನು ಆರಂಭಿಸಿರುವ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಇಂದು ನಾಡಿನ ಲಕ್ಷ-ಲಕ್ಷ ವಿದ್ಯಾರ್ಥಿಗಳ ಪಾಲಿಗೆ, ಸಾವಿರಾರು ಬೋಧಕರ ಹಾಗೂ ಇತರೆ ಸಿಬ್ಬಂದಿಯವರ ಪಾಲಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ.
ಅವರ ಶಿಕ್ಷಣದರ್ಶನದ ಮೂಲ ಆಶಯವೆಂದರೆ “ಜ್ಞಾನವು ವ್ಯಕ್ತಿಯ ಉನ್ನತಿಗೆ ಮಾತ್ರವಲ್ಲ, ಸಮಾಜದ ಒಳಿತಿಗೂ ಬಳಕೆಯಾಗಬೇಕು” ಎಂಬುದು ಅವರ ಕಳಕಳಯಾಗಿತ್ತು ಎಂದು ಹೇಳಿದರು.































