Home Lead News ಹನೂರು ಘಟನೆ ಸಿಐಡಿಗೆ

ಹನೂರು ಘಟನೆ ಸಿಐಡಿಗೆ

ಬೆಂಗಳೂರು,ಆ.೨೫- ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂವರು ಶೂಟೌಟ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿ ಐಜಿಪಿ)ಡಾ.ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.
ಮೂವರು ಎನ್‌ಕೌಂಟರ್ ಸಂಬಂಧಿಸಿದಂತೆ ದಾಖಲಿಸಿರುವ ನಾಲ್ಕು ಎಫ್‌ಐಆರ್‌ಗಳನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿದೆ.


ರಾಮಪುರ ಠಾಣೆಯಲ್ಲಿ ದಾಖಲಾದ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆ, ಹನೂರು ಠಾಣೆಯಲ್ಲಿ ದಾಖಲಾದ ಮೂವರು ಬೇಟೆಗಾರರ ಎನ್‌ಕೌಂಟರ್, ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಗೆ ಸೇರಿದ ವಸ್ತುಗಳಿಗೆ ಹಾನಿ, ಶಿಬಿರಗಳನ್ನು ನಾಶ, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆ ಹಾಗೂ ಅರಣ್ಯ ಇಲಾಖೆ ಶಿಬಿರಗಳ ನಾಶ, ಹಾನಿ ಸೇರಿ ನಾಲ್ಕು ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಲಾಗಿದೆ.


ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಎನ್ ಕೌಂಟರ್ ನಲ್ಲಿ ಅಂಥೋಣಿಸಾಮಿ, ಜಾನ್ ಪೀಟರ್ ಹಾಗೂ ಡೇವಿಡ್ ಕುಮಾರ್ ಹತ್ಯೆಯಾಗಿದ್ದರು. ಈ ಮೂವರೂ ಬೇಟೆಯಾಡುವ ಉದ್ದೇಶದಿಂದಲೇ ಅರಣ್ಯದೊಳಗೆ ಪ್ರವೇಶ ಮಾಡಿದ್ದರು. ಈ ಕಾರಣಕ್ಕಾಗಿಯೇ ನಾಡ ಬಂದೂಕು ತೆಗೆದುಕೊಂಡು ಹೋಗಿದ್ದರು ಎಂದು ಅರಣ್ಯಾಧಿಕಾರಿಗಳು ಆರೋಪಿಸಿದ್ದರು.


ಇದಕ್ಕೆ ಪೂರಕವಾಗಿ ಮೂವರ ಶವಗಳ ವೈದ್ಯಕೀಯ ಪರೀಕ್ಷೆ ನಡೆಸುವಾಗ ಸಾಕ್ಷಿಗಳು ದೊರೆತಿದ್ದವು. ಈ ಪೈಕಿ ಅಂಥೋಣಿಸಾಮಿ ಹಾಗೂ ಪೀಟರ್ ಧರಿಸಿದ್ದ ಒಳ ಉಡುಪಿನ ಜೇಬಿನಲ್ಲಿ ನಾಡ ಬಂದೂಕಿಗೆ ಬಳಸುವ ತಲಾ ೫ ಅಲ್ಯೂಮಿನಿಯಮ್ ಪ್ರೈಮರ್‌ಗಳು ಪತ್ತೆಯಾಗಿದ್ದವು. ನಾಡ ಬಂದೂಕುಗಳಲ್ಲಿ ಗನ್ ಪೌಡರ್ ಸ್ಫೋಟಿಸಲು ಬಳಸುವ ಅಲ್ಯೂಮಿನಿಯಮ್ ಕ್ಯಾಪ್ / ಪ್ರೈಮರ್ ಬಳಸಲಾಗುತ್ತದೆ.


ಇನ್ನೂ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮೂವರ ಮರಣೋತ್ತರ ಪರೀಕ್ಷೆಯನ್ನು ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ವರದಿಯಲ್ಲಿ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ ಎಂಬ ಅಂಶ ದೃಢಪಟ್ಟಿದೆ. ಇದು ಸ್ಥಳೀಯ ರೈತರು ಮತ್ತು ಮೃತರ ಕುಟುಂಬಸ್ಥರ ವಾದಕ್ಕೆ ಭಾರೀ ಬಲ ತಂದಿದೆ.
ಮೃತರ ಬಟ್ಟೆ ಮತ್ತು ಚರ್ಮದ ಮೇಲೆ ಗನ್‌ಪೌಡರ್ ಕಲೆಗಳು, ಹೊಗೆಯ ಕಪ್ಪು ಕಲೆಗಳು ಹಾಗೂ ಸುಟ್ಟ ಗಾಯಗಳು ಪತ್ತೆಯಾಗಿವೆ. ಇದು ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವುದನ್ನು ಸ್ಪಷ್ಟಪಡಿಸಿದೆ.


ಕುಟುಂಬಸ್ಥರ ವಾದ:


ದನಗಳನ್ನು ಹುಡುಕಲು ಹೋದ ಅಮಾಯಕರನ್ನು ಅರಣ್ಯ ಸಿಬ್ಬಂದಿ ಹಿಡಿದು, ಉದ್ದೇಶಪೂರ್ವಕವಾಗಿ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಮೊದಲಿನಿಂದಲೂ ಆರೋಪಿಸುತ್ತಿದ್ದರು.


ಮರಣೋತ್ತರ ವರದಿಯು ಸಮೀಪದಿಂದಲೇ ಗುಂಡು ಹಾರಿಸಲಾಗಿದೆ ಎಂದು ಹೇಳುತ್ತಿರುವುದರಿಂದ, ಕಾರ್ಯಾಚರಣೆಯಲ್ಲಿದ್ದ ಅರಣ್ಯ ಸಿಬ್ಬಂದಿಯನ್ನು ತಕ್ಷಣವೇ ವಶಕ್ಕೆ ಪಡೆದು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳು ಪಟ್ಟು ಹಿಡಿದಿವೆ, ವರದಿ ಬಹಿರಂಗಗೊಳ್ಳುತ್ತಿದ್ದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅರಣ್ಯ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿವೆ.


ಆತ್ಮರಕ್ಷಣೆಗೆ ದಾಳಿ:


ಅರಣ್ಯ ಇಲಾಖೆಯು “ಬೇಟೆಗಾರರು ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದೆವು” ಎಂದು ಹೇಳುತ್ತಿದ್ದರೆ, ಗ್ರಾಮಸ್ಥರು “ಇದು ಅಮಾಯಕರ ” ಎಂದು ಪ್ರತಿಪಾದಿಸುತ್ತಿದ್ದಾರೆ. ಪ್ರಕರಣದ ಅಂತಿಮ ತನಿಖಾ ವರದಿ ಇನ್ನಷ್ಟೇ ಸಲ್ಲಿಕೆಯಾಗಬೇಕಿದ್ದು, ತನಿಖಾಧಿಕಾರಿಗಳು ಯಾವ ಆಧಾರದ ಮೇಲೆ ವರದಿ ನೀಡುತ್ತಾರೆ ಎಂಬುದರ ಮೇಲೆ ಪ್ರಕರಣದ ಅಂತಿಮ ಸತ್ಯಾಂಶ ತಿಳಿಯಲಿದೆ. ಇನ್ನೂ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರಗೊಂಡಿದೆ ಮುಂದಿನ ದಿನಗಳಲ್ಲಿ ತನಿಖೆಯು ಮತ್ತಷ್ಟು ಚುರುಕುಗೊಳ್ಳಲಿದೆ.

ಸಿಐಡಿ ತನಿಖೆ ಹೊಸದೇನಲ್ಲ: ಪರಂ


ಹನೂರು ಕೇಸ್ ಸಿಐಡಿ ಹಸ್ತಾಂತರ ವಿಚಾರ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಅವರು ಸಾಮಾನ್ಯವಾಗಿ ಇಂಥಾ ಘಟನೆ ಆದಾಗ, ಸರ್ಕಾರಕ್ಕೆ ಅನುಮಾನ, ಬಂದಾಗ ಅದನ್ನ ಸಿಐಡಿ ಗೆ ಕೊಡುತ್ತದೆ ಎಂದಿದ್ದಾರೆ.


ಅದೇ ರೀತಿ ಹನೂರು ಘಟನೆಯ ಬಗ್ಗೆಯೂ ಸಿಐಡಿ ತನಿಖೆಗೆ ಆದೇಶಿಸಲಾಗಿದೆ , ಇದರಲ್ಲಿ ಏನೂ ಹೊಸದೇನೂ ಇಲ್ಲ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು


ಕುಮಾರಸ್ವಾಮಿ ವಿರುದ್ದ ಫೋನ್ ಟ್ಯಾಪಿಂಗ್ ವಿಚಾರ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ
ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ನಾನು ಗುರು ಸಚಿವ ಅಲ್ಲ ಎಂದು ಉತ್ತರಿಸಿದರು.