
ಕೋಲಾರ,ಜು.೧೬-ಕೋಲಾರ ಜಿಲ್ಲೆಯಲ್ಲಿ ತೀವ್ರಗೊಂಡಿರುವ ಕೃಷಿ ಬಿಕ್ಕಟ್ಟು, ಮಾವು ಹಾಗೂ ಟೊಮೆಟೊ ಬೆಳೆಗಾರರ ಸಂಕಷ್ಟ ಮತ್ತು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಕುರಿತು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ರೈತರ ಪರವಾಗಿ ಮಹತ್ವದ ಮನವಿ ಸಲ್ಲಿಸಿದರು.
ರಾಜ್ಯದ ಸಾವಿರಾರು ರೈತರು ಮಾವು ಮತ್ತು ಟೊಮೆಟೊ ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಸಿಗದ ಕಾರಣ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಶ್ರೀನಾಥ್ ವಿವರಿಸಿದರು.
ಈಗಾಗಲೇ ಮಾವಿಗೆ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಘೋಷಿಸಲು ನೀವು ಕೈಗೊಂಡಿರುವ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಿ, ರೈತರಿಗೆ ಹೆಚ್ಚಿನ ಅನುಕೂಲವಾಗುವಂತೆ ಮತ್ತಷ್ಟು ಬೆಂಬಲ ಬೆಲೆ ದೊರಕಿಸಿಕೊಡಬೇಕು. ಜೊತೆಗೆ ಟೊಮೆಟೊ ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಸಕ್ತ ಋತುವಿನಲ್ಲಿ ರಾಜ್ಯದಲ್ಲಿ ಸುಮಾರು ೫.೨೦ ಲಕ್ಷ ಟನ್ ಮಾವು ಇಳುವರಿ ನಿರೀಕ್ಷೆಯಿದ್ದರೂ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಅನೇಕ ರೈತರು ತೋಟದಲ್ಲೇ ಕಾಯಿ ಕೀಳದೆ ಬಿಡುವಂತಾಗಿದೆ. ಮತ್ತೊಮ್ಮೆ ಕೇಂದ್ರ ಕೃಷಿ ಸಚಿವ ಅವರೊಂದಿಗೆ ಚರ್ಚೆ ನಡೆಸುವಂತೆ ಸಿಎಂಆರ್ ಶ್ರೀನಾಥ್ ಅವರ ಮನವಿಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಂದಿಸಿದ್ದಾರೆ .
ಟೊಮೆಟೊ ಬೆಳೆಗಾರರ ಪರಿಸ್ಥಿತಿಯೂ ಅಷ್ಟೇ ದುಸ್ಥಿತಿಯಲ್ಲಿದ್ದು, ರೈತರಿಗೆ ಹೂಡಿಕೆ ಮಾಡಿದ ಬಂಡವಾಳವೂ ಮರಳಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಿದ್ದರಿಂದ ಸಾವಿರಾರು ರೈತರಿಗೆ ನೆರವಾಗಿತ್ತು. ಅದೇ ಮಾದರಿಯ ಕ್ರಮವನ್ನು ಮತ್ತೆ ಜಾರಿಗೆ ತರಬೇಕೆಂದು ಶ್ರೀನಾಥ್ ಮನವಿ ಮಾಡಿದರು.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಉಳುಮೆ ಹಾಗೂ ಬಿತ್ತನೆ ಕಾರ್ಯಗಳು ಕುಂಠಿತಗೊಂಡಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯೂ ತೀವ್ರವಾಗಿದೆ. ಗೋಶಾಲೆಗಳ ನಿರ್ವಹಣೆಯಲ್ಲಿಯೂ ಸಮಸ್ಯೆಗಳು ಎದುರಾಗಿದ್ದು, ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ರಾಜ್ಯದ ಬರಪೀಡಿತ ತಾಲೂಕುಗಳನ್ನು ತಕ್ಷಣವೇ ಘೋಷಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕುಮಾರಸ್ವಾಮಿ ಅವರ ಗಮನ ಸೆಳೆದರು.
ಈ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು ತಳಮಟ್ಟದಲ್ಲಿ ಹೋರಾಟ ಸಂಘಟಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂಆರ್ ಶ್ರೀನಾಥ್ ಅವರಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದ್ದು, ಮಾವು, ಟೊಮೆಟೊ ಬೆಳೆಗಾರರಿಗೆ ಬೆಂಬಲ ಬೆಲೆ ಹಾಗೂ ಬರಪೀಡಿತ ಪ್ರದೇಶ ಘೋಷಣೆ ಕುರಿತಂತೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಜೆಡಿಎಸ್ ತೀರ್ಮಾನಿಸಿದೆ.


































