Home ಜಿಲ್ಲೆ ಬೆಂಗಳೂರು ಜುಲೈ ೧ರಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು

ಜುಲೈ ೧ರಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು

ಬೆಂಗಳೂರು, ಜೂ. ೨೭: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಡೆತಡೆ ರಹಿತ ಪಾದಚಾರಿ ಮಾರ್ಗ ಕಲ್ಪಿಸಲು ಜುಲೈ ೧ರಿಂದ ವಿಶೇಷ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಲಿದ್ದು, ಜುಲೈ ೧೦ರೊಳಗೆ ಮೊದಲ ಹಂತದ ಕಾರ್ಯಾಚರಣೆ ಪೂರ್ಣಗೊಳಿಸಲು ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಪಾದಚಾರಿ ಮಾರ್ಗಗಳ ಮೇಲಿನ ಅನಧಿಕೃತ ಒತ್ತುವರಿ ತೆರವು, ರಸ್ತೆ ಗುಂಡಿಗಳ ವೈಜ್ಞಾನಿಕ ದುರಸ್ತಿ ಹಾಗೂ ಪ್ರಮುಖ ಜಂಕ್ಷನ್‌ಗಳ ಸಮಗ್ರ ಸುಂದರೀಕರಣ ಕುರಿತು ನಡೆದ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದರು.


ಮೊದಲ ಹಂತದಲ್ಲಿ ಓಲ್ಡ್ ಮದ್ರಾಸ್ ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ಸರ್ಜಾಪುರ ರಸ್ತೆ, ಹೂಡಿ?ಅಯ್ಯಪ್ಪನಗರ ರಸ್ತೆ, ಹೊರಮಾವು?ಕೆ. ನಾರಾಯಣಪುರ ರಸ್ತೆ, ಎಇಸಿಎಸ್ ರಸ್ತೆ, ಹೊರ ವರ್ತುಲ ರಸ್ತೆ, ವೈಟ್‌ಫೀಲ್ಡ್ ಮುಖ್ಯರಸ್ತೆ ಹಾಗೂ ಇಪಿಐಪಿ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಯಲಿದೆ.


ಕಾರ್ಯಾಚರಣೆಗೆ ವಿಭಾಗವಾರು ವಿಶೇಷ ತಂಡಗಳನ್ನು ರಚಿಸಿ, ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲು ಸೂಚಿಸಲಾಗಿದೆ. ಪೆಟ್ಟಿಗೆ ಅಂಗಡಿಗಳು, ತಳ್ಳುವ ಗಾಡಿಗಳು, ಕ್ಯಾನೊಪಿಗಳು, ತಾತ್ಕಾಲಿಕ ಶೆಡ್‌ಗಳು ಸೇರಿದಂತೆ ಎಲ್ಲಾ ರೀತಿಯ ಅನಧಿಕೃತ ಒತ್ತುವರಿಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ.


ನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ವೈಜ್ಞಾನಿಕ ರೀತಿಯಲ್ಲಿ ದುರಸ್ತಿಗೊಳಿಸುವಂತೆ ಸೂಚಿಸಿರುವ ಆಯುಕ್ತರು, ಗುಂಡಿಗಳನ್ನು ಸರಿಯಾದ ವಿಧಾನದಲ್ಲಿ ಕೋಲ್ಡ್ ಮಿಕ್ಸ್ ಬಳಸಿ ಯಾಂತ್ರಿಕವಾಗಿ ಕಾಂಪ್ಯಾಕ್ಟ್ ಮಾಡಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ಗುಂಡಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.


ಇದೇ ವೇಳೆ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಭಾರತೀಯ ರಸ್ತೆ ಕಾಂಗ್ರೆಸ್ (Iಖಅ) ಮಾರ್ಗಸೂಚಿಗಳಂತೆ ಸೂಕ್ತ ಕೇಂಬರ್ ವ್ಯವಸ್ಥೆಯೊಂದಿಗೆ ಕೈಗೊಳ್ಳಬೇಕು ಹಾಗೂ ಮಳೆ ನೀರು ಸರಾಗವಾಗಿ ಚರಂಡಿಗೆ ಹರಿಯುವಂತೆ ಸೈಡ್ ಡ್ರೈನ್‌ಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.


ಪ್ರಮುಖ ಜಂಕ್ಷನ್‌ಗಳ ಸುತ್ತಮುತ್ತ ೧೦೦ ಮೀಟರ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಸುಧಾರಣೆ, ಜೀಬ್ರಾ ಕ್ರಾಸಿಂಗ್ ಮತ್ತು ರಸ್ತೆ ಗುರುತುಗಳ ನವೀಕರಣ ಸೇರಿದಂತೆ ಸಮಗ್ರ ಸುಂದರೀಕರಣ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.


ನಗರ ಪಾಲಿಕೆ ಸಾರ್ವಜನಿಕರಿಗೂ ಮನವಿ ಮಾಡಿದ್ದು, ಪಾದಚಾರಿ ಮಾರ್ಗ ಮತ್ತು ರಸ್ತೆಗಳನ್ನು ಅತಿಕ್ರಮಿಸಿರುವ ಅಂಗಡಿಗಳು, ತಳ್ಳುವ ಗಾಡಿಗಳು, ಜಾಹೀರಾತು ಫಲಕಗಳು ಸೇರಿದಂತೆ ಎಲ್ಲಾ ಅನಧಿಕೃತ ಒತ್ತುವರಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದರೆ ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದೆ.