
ಬೆಂಗಳೂರು, ಆ. ೨೮- ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವ ಮನೋಭಾವಕ್ಕೆ ಅವಕಾಶ ನೀಡದೆ, ಎಲ್ಲರೂ ಸಮಾನರು ಎಂಬ ಮಾನವತಾ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಹನೀಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ “ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ?೨೦೨೬” ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಇದಕ್ಕೂ ಮುನ್ನ ಜಿಬಿಎ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣ ಬೈರೇಗೌಡ, ಜಿಬಿಎ ಹಾಗೂ ಐದು ನಗರ ಪಾಲಿಕೆಗಳು ಒಟ್ಟಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿವೆ ಎಂದು ತಿಳಿಸಿದರು. ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಕಾರ್ಯಕ್ರಮ ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಎಸ್‌ಐಆರ್ ಪ್ರಕ್ರಿಯೆಯ ಕಾರಣದಿಂದ ಆಚರಣೆ ವಿಳಂಬವಾಗಿದ್ದು, ಇದೀಗ ಆದ್ಯತೆಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
“ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಬುದ್ಧನ ಕಾಲದಿಂದಲೇ ನಮ್ಮ ದೇಶದಲ್ಲಿ ಮಾನವ ಧರ್ಮದ ಪರಂಪರೆ ಜೀವಂತವಾಗಿದೆ. ಮನುಷ್ಯರೆಲ್ಲರೂ ಒಂದೇ; ಗಾಳಿ, ನೀರು ಮತ್ತು ದೇಹ ಎಲ್ಲವೂ ಒಂದೇ ಎಂಬ ಅರಿವು ನಮ್ಮಲ್ಲಿರಬೇಕು” ಎಂದು ಹೇಳಿದರು.
ಬಸವಣ್ಣ, ಮಹಾತ್ಮ ಗಾಂಧೀಜಿ ಹಾಗೂ ಕುವೆಂಪು ಸೇರಿದಂತೆ ಅನೇಕ ಮಹನೀಯರು ಮಾನವತಾ ಧರ್ಮ ಮತ್ತು ಸಮಾನತೆಯ ಸಂದೇಶವನ್ನು ಪ್ರತಿಪಾದಿಸಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಸಂಪೂರ್ಣ ಸಮಾನತೆ ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
“ಮೇಲು-ಕೀಳು ಎಂಬ ಮನೋಭಾವವನ್ನು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಎಲ್ಲರೂ ಸಮಾನರು ಎಂಬ ಮೌಲ್ಯವನ್ನು ನಿಜವಾಗಿ ಅಳವಡಿಸಿಕೊಂಡಾಗಲೇ ನಾವು ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು” ಎಂದು ಸಚಿವರು ಹೇಳಿದರು.
ಪೌರಕಾರ್ಮಿಕರ ಕುಂದುಕೊರತೆಗಳು ಮತ್ತು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು, ರಾಜ್ಯ ಸಫಾಯಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ್ ಸಾಲಪ್ಪ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ ಹಾಗೂ ನಿತೀಶ್, ವಿವಿಧ ನಗರ ಪಾಲಿಕೆಗಳ ಆಯುಕ್ತರು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ ಸೇರಿದಂತೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
ಸಮಾನತೆ ಮತ್ತು ಮಾನವತೆಯೇ ಅಂಬೇಡ್ಕರ್ ಅವರ ಚಿಂತನೆಯ ಮೂಲ ಆಶಯವಾಗಿದ್ದು, ಅದನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸಂದೇಶದೊಂದಿಗೆ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.

































