
ಕಲಬುರಗಿ,ಆ.28: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್ ವತಿಯಿಂದ ಆಯೋಜಿಸಲಾಗಿದ್ದ “ಖೇಲೋ ಇಂಡಿಯಾ ಸಂವಾದ್ ಖೇಲ್ ಕಿ ಬಾತ್, ಪಿಎಂ ಮೋದಿ ಕೆ ಸಾಥ್” ಕಾರ್ಯಕ್ರಮದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ವರ್ಚುವಲ್ ಮುಖಾಂತರ ಭಾಗವಹಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ವಿದ್ಯಾರ್ಥಿಗಳು ತಮ್ಮ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕಡ್ಡಾಯವಾಗಿ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಹಾಗೂ ಪ್ರತಿದಿನ ದೈಹಿಕ ಚಟುವಟಿಕೆಗಾಗಿ ಸಮಯವನ್ನು ಮೀಸಲಿಡಬೇಕು ಎಂದು ಕರೆ ನೀಡಿದರು.
ಕ್ರೀಡೆ ಮತ್ತು ವ್ಯಾಯಾಮವು ಉತ್ತಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಮಾನಸಿಕ ಸದೃಢತೆಯನ್ನು ಹೆಚ್ಚಿಸುತ್ತದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ವಿ.ವಿ.ಯಲ್ಲಿ ಲಭ್ಯವಿರುವ ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳು, ಜಿಮ್‍ಗಳ ಸೌಲಭ್ಯ ಹಾಗೂ ನುರಿತ ತರಬೇತುದಾರರ ಸೇವೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಮ್ಮ ಆರೋಗ್ಯ ವೃದ್ಧಿ ಮತ್ತು ದೈಹಿಕ ಸಧೃಡತೆಯನ್ನು ಕಾಪಾಡಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಯುವಜನರನ್ನು ಉದ್ದೇಶಿಸಿ ನೀಡಿದ ಸ್ಪೂರ್ತಿದಾಯಕ ಸಂದೇಶವು ಯುವ ಸಮುದಾಯ ಫಿಟ್ ಇಂಡಿಯಾ ಮನೋಭಾವವನ್ನು ಅಳವಡಿಸಿಕೊಳ್ಳಲು ಮತ್ತು ವಿಕಸಿತ ಭಾರತ-2047 ರ ನಿರ್ಮಾಣದ ನಮ್ಮೆಲ್ಲರ ರಾಷ್ಟ್ರೀಯ ಸಂಕಲ್ಪಕ್ಕೆ ಪ್ರತಿಯೊಬ್ಬ ಯುವಕ-ಯುವತಿಯೂ ತಮ್ಮದೇ ಆದ ಕೊಡುಗೆ ನೀಡಲು ಮತ್ತಷ್ಟು ಪ್ರೇರಣೆ ನೀಡುತ್ತದೆ ಎಂದು ಕುಲಪತಿಗಳು ಹೇಳಿದರು.
ಕಾನೂನು ಅಧ್ಯಯನ ಮತ್ತು ವಿದ್ಯಾರ್ಥಿ ಕಲ್ಯಾಣದ ಡೀನ್ ಪ್ರೊ.ಬಸವರಾಜ ಎಂ ಕುಬಕಡ್ಡಿ ಅವರು ಮಾತನಾಡಿ ಆರೋಗ್ಯವೇ ಭಾಗ್ಯವಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಹ ಸಕ್ರೀಯವಾಗಿ ಭಾಗವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿ.ವಿ.ಯ ಕ್ರೀಡಾ ವಿಭಾಗದ ನೂತನ ವೆಬ್‍ಸೈಟ್‍ನ್ನು ಕುಲಪತಿಗಳು ಅನಾವರಣಗೊಳಿಸಿದರು. ರಾಜ್ಯ ಮತ್ತು ಜಿಲ್ಲಾ ಮಟ್ಟದ ಬಾಸ್ಕೆಟ್‍ಬಾಲ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಆಟಗಾರರಾದ ಸುರೇಶ್, ಸಿರಾಜುದ್ದೀನ್ ಮತ್ತು ಸಂತೋಷ್ ಅವರನ್ನು ವಿ.ವಿ.ಯಿಂದ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೈ ಭಾರತ್ ಕೇಂದ್ರದ ಜಿಲ್ಲಾ ಸಹಾಯಕ ನಿರ್ದೇಶಕರಾದ ಸುಮೀತ್ ಎಸ್ ಪಾರ್ಕಿ, ದೈಹಿಕಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎಸ್.ಪಾಸೋಡಿ, ಕಾರ್ಯಕ್ರಮ ಸಂಯೋಜಕ ಡಾ.ಮಲ್ಲಿಕಾರ್ಜುನ ಹೂಗಾರ, ಕ್ರೀಡಾ ಸಂಯೋಜಕ ಡಾ.ಸಾಯಿ ಅಭಿನವ ಸೇರಿದಂತೆ ವಿವಿಧ ವಿಭಾಗಗಳ ಡೀನ್‍ರು, ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
































