
ಬೆಂಗಳೂರು,ಆ.೨೮- ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕ ಪೊಲೀಸ್ ಸ್ಕ್ವಾಡ್‌ಗಳನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜಧಾನಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾದ ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ರಾಜಾರೋಷವಾಗಿ ನಡೆಯುತ್ತಿರುವ ರೌಡಿಸಂ ಅನ್ನು ನಿಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪೊಲೀಸರು ಯಾವುದೇ ಚಿಂತೆ ಮಾಡದೆ ಧೈರ್ಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ನೀವೇ ಧರ್ಮ ಕಾಯುವವರು, ನಿಷ್ಠೆಯಿಂದ ಕೆಲಸ ಮಾಡುವವರು. ನಾಡಿನ ರಕ್ಷಣೆಗಾಗಿ ನಿಮ್ಮನ್ನು ಇಲ್ಲಿ ಕರೆದುಕೊಂಡು ಬಂದಿದ್ದೇವೆ. ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪೊಲೀಸ್ ಸಿಬ್ಬಂದಿಯ ಸಾಮರ್ಥ್ಯ, ಕೌಶಲ್ಯ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿದೆ. ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಬೆಂಗಳೂರಿನ ಜನರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ವಿಶೇಷ ತರಬೇತಿ ನೀಡಲಾಗುತ್ತಿದೆ.
ನಮ್ಮ ರಕ್ಷಣೆಗಾಗಿ ನೀವು ತರಬೇತಿ ಪಡೆದಿದ್ದೀರಿ. ಹಗಲಿರುಳು ಕಠಿಣ ತರಬೇತಿ ಪಡೆದು ಕರ್ತವ್ಯಕ್ಕೆ ಸಜ್ಜಾಗಿದ್ದೀರಿ. ನಿಮ್ಮ ಕೌಶಲ್ಯವನ್ನು ಹೆಚ್ಚಿಸಲು ಈ ವಿಶೇಷ ತರಬೇತಿ ನೀಡಲಾಗಿದೆ .ನೀವೇ ಕಾನೂನು ಪಾಲಕರು, ನೀವೇ ಕಾನೂನಿನ ರಕ್ಷಕರು. ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಓSಉ ತರಬೇತಿ ಸಾರ್ಥಕವಾಗಬೇಕು. ಅಶಾಂತಿ ಹಾಗೂ ಭಯೋತ್ಪಾದನೆ ತಡೆಗಟ್ಟಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಪೊಲೀಸರಿಗೆ ಕರೆ ನೀಡಿದರು.
ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿರುವ ಹಿನ್ನೆಲೆಯಲ್ಲಿ ಕಮಾಂಡೋ ಪಡೆಯ ಅಗತ್ಯವಿದೆ ಎಂದು ತಿಳಿಸಿದ ಅವರು, ರಾಜ್ಯದ ಭದ್ರತೆಗಾಗಿ ವಿಶೇಷ ಕಮಾಂಡೋ ಪಡೆ ಮತ್ತಷ್ಟು ಬಲಿಷ್ಠವಾಗಬೇಕು.ಪೊಲೀಸರು ಹಗಲಿರುಳು ಜನರ ರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಗಡಿಯಲ್ಲಿ ಸೈನಿಕರು ಹೇಗೆ ಕರ್ತವ್ಯ ನಿರ್ವಹಿಸುತ್ತಾರೋ, ಅದೇ ರೀತಿ ಪೊಲೀಸರು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಎನ್.ಎ. ಹ್ಯಾರಿಸ್ ಅಧ್ಯಕ್ಷತೆ ವಹಿಸಿದ್ದರು.

































