Home ಮುಖಪುಟ ಸುದ್ದಿ ಕಲಬೆರಕೆ ಮದ್ಯ ಸೇವನೆ ಶಂಕೆ: ೧೫ ಮಂದಿ ಸಾವು,

ಕಲಬೆರಕೆ ಮದ್ಯ ಸೇವನೆ ಶಂಕೆ: ೧೫ ಮಂದಿ ಸಾವು,

ಚಾಂಡೆಲ್.ನ೨೧: ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವನೆ ಶಂಕೆಯಿಂದ ೧೫ ಮಂದಿ ಮೃತಪಟ್ಟಿದ್ದು, ೧೮೦ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ.೧೮ರಿಂದ ೨೦ರವರೆಗೆ ಸಾವುಗಳು ಸಂಭವಿಸಿದ್ದು, ಪ್ರಕರಣ ರಾಜ್ಯದಲ್ಲಿ ಆತಂಕ ಮೂಡಿಸಿದೆ.

ಆರಂಭದಲ್ಲಿ ಎಂಟು ಸಾವುಗಳು ದೃಢಪಟ್ಟಿದ್ದವು. ಬಳಿಕ ಸಾವಿನ ಸಂಖ್ಯೆ ೧೫ಕ್ಕೆ ಏರಿಕೆಯಾಗಿದೆ. ಕೆಲವರು ಮನೆಯಲ್ಲೇ ಮೃತಪಟ್ಟರೆ, ಇನ್ನು ಕೆಲವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಹಾಗೂ ಚಕ್ಪಿಕರೋಂಗ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟಿದ್ದಾರೆ.

ಮೃತರು ಸೇವಿಸಿದ್ದ ಮದ್ಯವನ್ನು ಕಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದಿಂದ ತರಲಾಗಿತ್ತು ಎಂದು ಚಾಂಡೆಲ್ ಪೊಲೀಸರು ತಿಳಿಸಿದ್ದಾರೆ. ಮದ್ಯವನ್ನು ಚಾಂಡೆಲ್‌ನಲ್ಲಿ ತಯಾರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದು, ಐದು ಸಾವುಗಳು ಸುಗ್ನು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿವೆ ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಎಚ್ಚರಿಕೆ
ಮದ್ಯ ಸೇವನೆಯಿಂದ ಸಾವು ಸಂಭವಿಸಿರುವುದಕ್ಕೆ ನಿಖರ ಕಾರಣ ಇನ್ನೂ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅನುಮಾನಾಸ್ಪದ ಮೂಲಗಳಿಂದ ಬಂದ ಮದ್ಯ ಹಾಗೂ ಸ್ಥಳೀಯವಾಗಿ ತಯಾರಿಸಿದ ಮದ್ಯ ಸೇವಿಸದಂತೆ ಸೂಚಿಸಿದೆ.

ಮದ್ಯ ಸೇವಿಸಿದ ಬಳಿಕ ವಾಂತಿ, ಹೊಟ್ಟೆನೋವು, ತಲೆನೋವು, ತಲೆಸುತ್ತು, ದೃಷ್ಟಿ ಮಸುಕಾಗುವುದು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯುವಂತೆ ತಿಳಿಸಿದೆ. ಲಕ್ಷಣಗಳಿಲ್ಲದಿದ್ದರೂ ಅದೇ ಮದ್ಯ ಸೇವಿಸಿರುವವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಿದೆ.

ಮುಖ್ಯಮಂತ್ರಿ ಯುಮ್ನಮ್ ಖೇಮಚಂದ್ ಸಿಂಗ್ ಅವರು ಇಂಫಾಲ್‌ನ ಶಿಜಾ ಆಸ್ಪತ್ರೆ ಮತ್ತು ಬಬಿನಾ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಚರ್ಚಿಸಿ ಚಿಕಿತ್ಸೆಯ ಮಾಹಿತಿ ಪಡೆದ ಅವರು, ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಾಂಡೆಲ್ ಜಿಲ್ಲೆಗೆ ತಜ್ಞ ವೈದ್ಯರ ತಂಡ ಹಾಗೂ ಅಗತ್ಯ ಔಷಧಗಳನ್ನು ಕಳುಹಿಸಲಾಗಿದ್ದು, ಪೊಲೀಸರು ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ತನಿಖೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ.