
ಬೆಂಗಳೂರು:ನ,೨೧-ಐದು ಪೊಲೀಸ್ ಕಮಿಷನರೇಟ್ಗಳ ರಚನೆಯ ಬೆನ್ನಲ್ಲೇ ಇದೀಗ ಬೆಂಗಳೂರು ಆಡಳಿತ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಿಂದ ಹೊರಗಿರುವ ತಾಲ್ಲೂಕುಗಳನ್ನು ಒಗ್ಗೂಡಿಸಿ ಹೊಸ ಮಹಾನಗರ ಪಾಲಿಕೆಯೊಂದನ್ನು ರಚಿಸುವ ಸಾಧ್ಯತೆ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಆಡಳಿತ ವ್ಯವಸ್ಥೆಯನ್ನು ಮರುರೂಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದ್ದು, ಬೆಂಗಳೂರು ಜಿಲ್ಲೆಯ ಭವಿಷ್ಯದ ಸ್ವರೂಪದ ಬಗ್ಗೆಯೂ ಚರ್ಚೆ ನಡೆದಿದೆ.
ಜಿಬಿಎ ವ್ಯಾಪ್ತಿಯಿಂದ ಹೊರಗಿರುವ ನಾಲ್ಕು ತಾಲ್ಲೂಕುಗಳನ್ನು ಒಗ್ಗೂಡಿಸಿ ಪ್ರತ್ಯೇಕ ಮಹಾನಗರ ಪಾಲಿಕೆಯೊಂದನ್ನು ರಚಿಸುವುದು ಸರ್ಕಾರದ ಮುಂದಿರುವ ಪ್ರಮುಖ ಪ್ರಸ್ತಾವನೆ ಎನ್ನಲಾಗಿದೆ. ಈ ಮೂಲಕ ಬೆಂಗಳೂರು ನಗರದ ಹೊರವಲಯದ ಪ್ರದೇಶಗಳಿಗೂ ಸಮಗ್ರ ನಗರಾಡಳಿತ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ ಎಂದು ಹೇಳಲಾಗುತ್ತಿದೆ.
ಹೊಸದಾಗಿ ರಚನೆ ಮಾಡುವ ಜಿಲ್ಲೆಯನ್ನು ಜಿಬಿಎ ವ್ಯಾಪ್ತಿಯ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡುತ್ತದೆ.
ಇದರ ಭಾಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರದ್ದುಗೊಳಿಸಿ, ಬೆಂಗಳೂರು ನಗರ ಜಿಲ್ಲೆಯ ಆಡಳಿತಾತ್ಮಕ ವ್ಯಾಪ್ತಿಯನ್ನು ಮರುರೂಪಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಯಾವ ನಾಲ್ಕು ತಾಲ್ಲೂಕುಗಳನ್ನು ಸೇರ್ಪಡೆ ಮಾಡಲಾಗುತ್ತದೆ, ಹೊಸ ಪಾಲಿಕೆಯ ವ್ಯಾಪ್ತಿ ಎಷ್ಟಿರಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.
ಹೊಸದಾಗಿ ರಚಿಸಲು ಉದ್ದೇಶಿಸಿರುವ ಸ್ಥಳೀಯ ಸಂಸ್ಥೆಗೆ ಎಷ್ಟು ಜನಸಂಖ್ಯೆ ಇರಲಿದೆ ಎಂಬುದು ಕೂಡ ನಿರ್ಣಾಯಕವಾಗಲಿದೆ. ಅಗತ್ಯ ಜನಸಂಖ್ಯೆಯ ಮಾನದಂಡ ಪೂರೈಸದಿದ್ದರೆ ಮಹಾನಗರ ಪಾಲಿಕೆಯ ಬದಲಿಗೆ ಸಿಟಿ ಮುನ್ಸಿಪಲ್ ಕಾರ್ಪೊರೇಷನ್ (ಸಿಎಂಸಿ) ಮಾದರಿಯ ಸ್ಥಳೀಯ ಸಂಸ್ಥೆಯನ್ನಾಗಿ ರೂಪಿಸುವ ಸಾಧ್ಯತೆಯೂ ಚರ್ಚೆಯಲ್ಲಿದೆ ಎನ್ನಲಾಗಿದೆ.
ಈ ಬದಲಾವಣೆಗಳು ಜಾರಿಯಾದರೆ ಬೆಂಗಳೂರು ನಗರದ ಆಡಳಿತಾತ್ಮಕ ಗಡಿಗಳು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಹಾಗೂ ನಗರಾಭಿವೃದ್ಧಿ ಯೋಜನೆಗಳಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಯಿದೆ.
ಈ ಬೆಳವಣಿಗೆಗಳ ನಡುವೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ವೇಳಾಪಟ್ಟಿಯ ಬಗ್ಗೆಯೂ ಕುತೂಹಲ ಹೆಚ್ಚಿದೆ. ಆಡಳಿತಾತ್ಮಕ ಪುನರ್ರಚನೆಯ ಹಿನ್ನೆಲೆಯಲ್ಲಿ ಸ್ಥಳೀಯ ಚುನಾವಣೆಗಳನ್ನು ಮುಂದೂಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಭವಿಷ್ಯದ ಸ್ವರೂಪ, ಗ್ರಾಮಾಂತರ ಜಿಲ್ಲೆಯ ಅಸ್ತಿತ್ವ, ಹೊಸ ಮಹಾನಗರ ಪಾಲಿಕೆಯ ರಚನೆ ಹಾಗೂ ಜಿಬಿಎ ಹೊರವಲಯದ ತಾಲ್ಲೂಕುಗಳ ಸೇರ್ಪಡೆ ಸೇರಿದಂತೆ ಹಲವು ಆಯಾಮಗಳಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ನಗರಾಭಿವೃದ್ಧಿ ಇಲಾಖೆಯೂ ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ ಎಂಬ ಮಾಹಿತಿ ಉನ್ನತ ಮಟ್ಟದ ಅಧಿಕಾರಿಗಳು ನೀಡಿದರೆ.
ಒಟ್ಟಿನಲ್ಲಿ, ಬೆಂಗಳೂರು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿ ಮರುರೂಪಿಸುವ ಸರ್ಕಾರದ ಚಿಂತನೆ ಕಾರ್ಯರೂಪಕ್ಕೆ ಬಂದರೆ, ನಗರದ ಹೊರವಲಯದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಸಂಭವಿಸಬಹುದು.
ಆದರೆ, ಈ ಎಲ್ಲ ಪ್ರಸ್ತಾವನೆಗಳ ಬಗ್ಗೆ ಸರ್ಕಾರದ ಅಧಿಕೃತ ಘೋಷಣೆ ಹೊರಬಂದ ಬಳಿಕವಷ್ಟೇ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.























