
ತಿಪಟೂರು, ಜು. ೧೮- ಸೇವೆ ಮತ್ತು ಸಹಕಾರವೇ ರೋಟರಿ ಸಂಸ್ಥೆಯ ಮೂಲ ಧ್ಯೇಯವಾಗಿದ್ದು, ಕಳೆದ ೬೭ ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಸೇವೆಯ ಹಾದಿಯಲ್ಲಿ ನಡೆದು ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರೆಸಲಾಗುವುದು ಎಂದು ತಿಪಟೂರು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಪ್ರಕಾಶ್ ಕ್ಯಾತನಹಳ್ಳಿ ಹೇಳಿದರು.
ನಗರದ ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ನಡೆದ ತಿಪಟೂರು ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಬ್ಯಾಡ್ಜ್ ಹಸ್ತಾಂತರದ ಮೂಲಕ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಗವರ್ನರ್ ರವಿಶಂಕರ್ ದಕುಜಿ ಮಾತನಾಡಿ, ಪರಿಸರ ಸಂರಕ್ಷಣೆ, ಪ್ರಕೃತಿ ಹಾಗೂ ಪ್ರಾಣಿ-ಪಕ್ಷಿಗಳ ಉಳಿವಿಗೆ ಈ ವರ್ಷ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯಾದ್ಯಂತ ವ್ಯಾಪಕವಾಗಿ ಗಿಡಗಳನ್ನು ನೆಡುವುದು ಹಾಗೂ ಬೇಸಿಗೆ ಸಂದರ್ಭದಲ್ಲಿ ಮೂಕಪ್ರಾಣಿ ಮತ್ತು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮಹತ್ವದ ಗುರಿಯನ್ನು ರೋಟರಿ ಹೊಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷೆ ವನಿತಾ ಪ್ರಸನ್ನ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೋಮಲಾ, ಜಿಲ್ಲಾ ಗವರ್ನರ್ ರೇಣುಕೇಶ್, ಶಿವಾನಂದ್, ಟ್ರಸ್ಟ್ ಅಧ್ಯಕ್ಷ ಬಿ.ಸಿ. ಪ್ರಭುಸ್ವಾಮಿ, ಅಶೋಕ್ ಗವಿರಣ್ಣ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.


































