Home ಜಿಲ್ಲೆ ತುಮಕೂರು ಕೇಂದ್ರ ಸರ್ಕಾರದ ವಿರುದ್ಧ ಪಿಂಚಣಿದಾರರ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಪಿಂಚಣಿದಾರರ ಪ್ರತಿಭಟನೆ

oppo_0

ತುಮಕೂರು, ಜು. ೧೮- ಇಪಿಎಸ್-೯೫ ಪಿಂಚಣಿದಾರರು ಕೇಂದ್ರ ಸರ್ಕಾರದ ಮುಂದೆ ತಮ್ಮ ಬೇಡಿಕೆ ಈಡೇರಿಕೆಗಾಗಿ ಕಳೆದ ಹತ್ತು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಬೇಡಿಕೆ ಈಡೇರಿಸುವಂತೆ ಹೋರಾಟವನ್ನೂ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಇಪಿಎಸ್ -೯೫ ಪಿಂಚಣಿದಾರರ ಬೇಡಿಕೆ ಈಡೇರಿಸುವಲ್ಲಿ ಮುಂದಾಗಿಲ್ಲ ಎಂಬ ಆಕ್ರೋಶದ ಕಿಚ್ಚು ಪಿಂಚಣಿದಾರರಿಂದ ಕೇಳಿ ಬಂದಿದೆ.


ಹತ್ತು ವರ್ಷಗಳಿಂದಲೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಪಿಂಚಣಿದಾರರು ಹೋರಾಟಕ್ಕಿಳಿಯುವ ಪರಿಸ್ಥಿತಿ ಅನಿವಾರ್ಯವಾಗಿದ್ದು, ಇದರ ಭಾಗವಾಗಿ ತುಮಕೂರಿನ ಇಪಿಎಸ್- ೯೫ ಪಿಂಚಣಿದಾರರು ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಎನ್‌ಎಸ್‌ಇ ಸಹ ಕಾರ್ಯದರ್ಶಿ ಕೆ.ಎಸ್.ರಾಜಣ್ಣ ಅವರು, ಇಪಿಎಸ್-೯೫ ಪಿಂಚಣಿದಾರರು ಕನಿಷ್ಠ ಮಾಸಿಕ ಪಿಂಚಣಿಯನ್ನು ೭೫೦೦ ಕ್ಕೆ ಹೆಚ್ಚಿಸಬೇಕು. ವಿಧವಾ ಪಿಂಚಣಿ ಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.


ಕಳೆದ ೧೦ ವರ್ಷಗಳಿಂದ ಪಿಂಚಣಿದಾರರು ನಿರಂತರ ಹೋರಾಟ ನಡೆಸುತ್ತಾ, ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅಲ್ಪ ಪ್ರಮಾಣದ ಪಿಂಚಣಿ ಹಾಗೂ ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಪಿಂಚಣಿದಾರರ ಸಂಕಷ್ಟ ಹೆಚ್ಚುತ್ತಿದೆ. ಕೂಡಲೇ ಸರ್ಕಾರ ನಮ್ಮ ಸಮಸ್ಯೆ ಈಡೇರಿಸಬೇಕು. ಇಲ್ಲವಾದಲ್ಲಿ ನಾವು ರಾಷ್ಟ್ರಪತಿಗೆ ದಯಾಮರಣ ಕೋರುತ್ತೇವೆ ಎಂದರು.


ಎನ್‌ಎಸ್‌ಇ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ ಹೋರಾಟ ಮಾಡಿದ್ದೇವೆ. ಆದರೂ, ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಒಂದಿಷ್ಟು ಗಮನ ಕೊಡುತ್ತಿಲ್ಲ. ಹೀಗಾದರೆ ನಾವು ಉಗ್ರವಾದ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.


ಎನ್‌ಎಸ್‌ಇ ಉಪಾಧ್ಯಕ್ಷ ಪ್ರಭಾಕರ್ ಮಾತನಾಡಿ, ಕೇಂದ್ರ ಸರ್ಕಾರ ನಮ್ಮ ಮನವಿಗೆ ಕಿವಿಗೊಡಬೇಕು. ಇಲ್ಲದಿದ್ದರೆ ಪಿಂಚಣಿದಾರರು ಉಗ್ರ ಹೋರಾಟಕ್ಕೆ ಮುಂದಾಗುವುದು ಅವಾರ್ಯವಾಗುತ್ತದೆ ಎಂದರು.
ಇಪಿಎಸ್- ೯೫ ಪಿಂಚಣಿದಾರರು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮೂಲಕ ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆ ಮುಂದಿಡಲು ಮುಂದಾಗಿ ಸಚಿವರ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು. ಆದರೆ, ಅವಕಾಶ ಸಿಗದೇ ತುಮಕೂರು ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು.


ಪ್ರತಿಭಟನೆಯಲ್ಲಿ ಎನ್‌ಎಸ್‌ಇ ಜಿಲ್ಲಾಧ್ಯಕ್ಷ ರಮೇಶ್, ಉಪಾಧ್ಯಕ್ಷ ಪ್ರಭಾಕರ್, ಸಹ ಕಾರ್ಯದರ್ಶಿ ಕೆ.ಎಸ್.ರಾಜಣ್ಣ, ಪುಟ್ಟರಾಜು, ದೊಡ್ಡೆಗೌಡ, ನಾಗರಾಜು ಸೇರಿದಂತೆ ನೂರಾರು ಪಿಂಚಣಿದಾರರು ಪಾಲ್ಗೊಂಡಿದ್ದರು.