
ಹುಳಿಯಾರು, ಜು. ೧೮- ಪ್ರಸ್ತುತ ಸಮಾಜದಲ್ಲಿ ಮಕ್ಕಳು ಹಠಕ್ಕೆ ಬಿದ್ದು ಪೋಷಕರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪೋಷಕರು ದಿನಕ್ಕೆ ಕನಿಷ್ಠ ಹತ್ತು ನಿಮಿಷವಾದರೂ ದೇವರನ್ನು ಸ್ಮರಿಸುವುದರೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಜ್ಞಾನಪ್ರಭು ಯಳನಾಡು ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಹೋಬಳಿ ಯಳನಡು ಮಠದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ’ಹಳ್ಳಿಗೊಂದು ವಚನ ದೀಪ’ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಸ್ಕಾರ ಮತ್ತು ಸಂಸ್ಕೃತಿಯು ವ್ಯಕ್ತಿಯ ಜೀವನಕ್ಕೆ ಶಾಂತಿ, ನೆಮ್ಮದಿ ಹಾಗೂ ಸನ್ಮಾರ್ಗವನ್ನು ತೋರಿಸುತ್ತದೆ. ಮನೆಯಲ್ಲಿ ತಂದೆ-ತಾಯಿ ಪ್ರತಿನಿತ್ಯ ಮಾಡುವ ದೇವರ ಪೂಜೆ, ಗುರುವಿನ ಪೂಜೆ ಮತ್ತು ಅವರ ಕಾಯಕದ ಬದುಕನ್ನು ಮಕ್ಕಳು ಚಿಕ್ಕ ವಯಸ್ಸಿನಿಂದಲೇ ನೋಡುತ್ತಾ ಬೆಳೆದರೆ, ಅವರೂ ಅದನ್ನೇ ಅನುಕರಿಸುತ್ತಾರೆ. ಶರಣರ ಕಾಲದಲ್ಲೇ ಪುರುಷರು ಮತ್ತು ಮಹಿಳೆಯರು ಸಮಾನರು ಎಂದು ಸಾರಲಾಗಿತ್ತು. ಹೆಣ್ಣಿನ ಮೇಲಿನ ಶೋಷಣೆಯನ್ನು ಖಂಡಿಸಿ ವಚನ ಸಾಹಿತ್ಯ ರಚಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೊನ್ನೇಬಾಗಿ ಬಸವರಾಜು ಮಾತನಾಡಿ, ತಾಲ್ಲೂಕಿನಲ್ಲಿ ಶರಣ ಪರಿಷತ್ತಿನ ವತಿಯಿಂದ ತಿಂಗಳಿಗೊಮ್ಮೆ ’ಹಳ್ಳಿಗೊಂದು ವಚನ ದೀಪ’ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶರಣರ ತತ್ವಾದರ್ಶಗಳನ್ನು ಸಾರುವ ಮುಖ್ಯ ಉದ್ದೇಶ ಹೊಂದಿರುವ ಈ ಕಾರ್ಯಕ್ರಮವನ್ನು ಯಾವುದೇ ಹಣಕಾಸಿನ ವ್ಯವಹಾರವಿಲ್ಲದೆ ಅತ್ಯಂತ ಸರಳವಾಗಿ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ಸಿ.ರವಿಕುಮಾರ್, ಶರಣರ ಆಂದೋಲನ’ದ ಕುರಿತು ಹಾಗೂ ಪ್ರೊ. ವಿ.ಡಿ.ಕಂಚಿರಾಯಸ್ವಾಮಿ ಅವರು ’ಹಡಪದ ಅಪ್ಪಣ್ಣ’ನವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪರಿಷತ್ತಿನ ಖಜಾಂಚಿ ಸಿ.ಮಲ್ಲಿಕಾರ್ಜುನಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮಠದ ಭಕ್ತರಾದ ನಿವೃತ್ತ ಉಪನ್ಯಾಸಕ ಶ್ರೀಕಂಠಮೂರ್ತಿ, ಪರಮೇಶ್ವರಯ್ಯ, ಸಿದ್ದರಾಮಣ್ಣ, ಟಿ.ಶಂಕರಯ್ಯ ಸೇರಿದಂತೆ ಸ್ಥಳೀಯ ಮೂರು ಭಜನಾ ಮಂಡಳಿಗಳ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.


































