
ಮಾಲೂರು, ನ. ೨೨- ಮುಂಬರುವ ೨೦೨೮ರ ವಿಧಾನಸಭಾ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಮ್ಮನ್ನು ಮತ್ತು ತಮ್ಮ ಪುತ್ರನನ್ನು ಸೋಲಿಸಿ ಮನೆಗೆ ಕಳುಹಿಸುವುದಾಗಿ ಹೇಳಿಕೆ ನೀಡಿರುವ ದಿವಂಗತ ಮುಖಂಡ ರಾಜಣ್ಣ ಅವರ ಪುತ್ರ ಸತೀಶ್ ರಾಜಣ್ಣ ಅವರಿಗೆ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಖಾರವಾಗಿ ತಿರುಗೇಟು ನೀಡಿದ್ದು, ತಾಕತ್ತಿದ್ದರೆ ಟೇಕಲ್ ಕ್ಷೇತ್ರದಿಂದ ಸ್ಪರ್ಧಿಸಿ ೧೦ ಸಾವಿರ ಮತ ಪಡೆಯುವಂತೆ ಬಹಿರಂಗ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ೧೦ ಸಾವಿರ ಮತಗಳನ್ನು ಕಡಿಮೆ ಮಾಡಿಸುವುದಾಗಿ ಸತೀಶ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಟೇಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಯಾರು ಬೇಕಾದರೂ ಸ್ಪರ್ಧಿಸಬಹುದು. ಅವರಿಗೆ ಅಷ್ಟೊಂದು ಶಕ್ತಿ ಇದ್ದರೆ ಯಾವುದೇ ಪಕ್ಷದಿಂದ ತಾವೇ ಅಭ್ಯರ್ಥಿಯಾಗಿ ಕಣಕ್ಕಿಳಿದು ೧೦ ಸಾವಿರ ಮತಗಳನ್ನು ಪಡೆದು ತೋರಿಸಲಿ. ಹಾಗೆ ಮತ ಪಡೆದರೆ ತಾವು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದನ್ನೇ ಬಿಟ್ಟುಬಿಡುವುದಾಗಿ ನಂಜೇಗೌಡ ನೇರ ಸವಾಲು ಎಸೆದರು.
ಸತೀಶ್ ಅವರ ಟೀಕೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕರು, ರಾಜಕೀಯವಾಗಿ ತಮ್ಮನ್ನು ಬೆಳೆಸಿದ ಗುರುಗಳಾದ ರಾಜಣ್ಣ ಅವರು ಎಂದಿಗೂ ಯಾರಿಗೂ ತೊಂದರೆ ಕೊಟ್ಟವರಲ್ಲ ಅಥವಾ ಯಾರ ಬಗ್ಗೆಯೂ ಕೀಳಾಗಿ ಮಾತನಾಡಿದವರಲ್ಲ ಎಂದು ಸ್ಮರಿಸಿದರು. ಇಂದು ರಾಜಣ್ಣ ನಮ್ಮೊಂದಿಗಿಲ್ಲ ಎಂಬ ನೋವು ತಮಗಿದೆ ಎಂದ ನಂಜೇಗೌಡ, ಸತೀಶ್ ಇನ್ನೂ ಚಿಕ್ಕ ಹುಡುಗನಾಗಿದ್ದು, ತಮ್ಮ ಗುರುವಿನ ಮಗ ಎಂಬ ಕಾರಣಕ್ಕೆ ಆ ಕುಟುಂಬದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಹಿಂದೆ ತಮ್ಮ ಬಳಿ ಬಂದು ಕೆಲಸ ಮಾಡಿಸಿಕೊಂಡು ಹೋಗಿದ್ದ ವ್ಯಕ್ತಿ ಈಗ ಅದನ್ನೆಲ್ಲಾ ಮರೆತಿದ್ದು, ಕೈಯಲ್ಲಿ ಸ್ವಲ್ಪ ಹಣ ಜಾಸ್ತಿಯಾಗಿ ತಲೆ ಕೆಟ್ಟು ಹೀಗೆಲ್ಲಾ ಮಾತನಾಡುತ್ತಿದ್ದಾರೆ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಡಿದರು.
೬೦ ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದರೂ ಬೆಲೆ ಇಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ನಂಜೇಗೌಡರು, ೬೦ ಅಲ್ಲ ೧೦೦ ವರ್ಷವಾದರೂ ತಾಳ್ಮೆ, ನಿಷ್ಠೆ ಮತ್ತು ಘನತೆಯಿಂದ ನಡೆದುಕೊಂಡವರನ್ನು ಕಾಂಗ್ರೆಸ್ ಪಕ್ಷ ಖಂಡಿತವಾಗಿ ಗುರುತಿಸಿ ಅವಕಾಶ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು. ಚುನಾವಣೆ ಗೆದ್ದ ಬಳಿಕ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಭೂಮಿಪೂಜೆ ಕಾರ್ಯಕ್ರಮಕ್ಕೆ ತಾವು ಭೇಟಿ ನೀಡಿದ್ದನ್ನು ನೆನಪಿಸಿದರು. ಅಂದು ಇದೇ ವ್ಯಕ್ತಿ ’ಜೈ ಎಂಪಿಎಲ್ ಎಂದು ಘೋಷಣೆ ಕೂಗಿ, ಶಾಸಕರ ವಿರುದ್ಧ ಮಾತನಾಡುವವರಿಗೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಹೇಳಿದ್ದರು. ಆಗ ತಾವೇ ಮಧ್ಯಪ್ರವೇಶಿಸಿ ಪಕ್ಷದ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನಾಡದಂತೆ ಬುದ್ಧಿ ಹೇಳಿದ್ದೆ ಎಂದು ತಿರುಗೇಟು ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು. ಎರಡು ಸಾಮಾನ್ಯ ಹಾಗೂ ಮೂರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳ ಪೈಕಿ ಲಕ್ಕೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಈಗಾಗಲೇ ಅಂತಿಮಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ ಎಂದರು.
ಕುಡಿಯನೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂತೆಹಳ್ಳಿ ನಾರಾಯಣಸ್ವಾಮಿ (ಕುಮಾರಣ್ಣ) ಅವರನ್ನು ಒಟ್ಟಿಗೆ ಕೂರಿಸಿ ಮಾತನಾಡಿ ಗೊಂದಲ ಬಗೆಹರಿಸಲಾಗುವುದು ಎಂದು ತಿಳಿಸಿದರು. ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸಲಾಗಿದ್ದು, ತೊರ್ನಹಳ್ಳಿ ಮತ್ತು ಟೇಕಲ್ ಕ್ಷೇತ್ರಗಳ ಸಿದ್ಧತೆ ಪೂರ್ಣಗೊಂಡಿದೆ ಹಾಗೂ ಮೀಸಲು ಕ್ಷೇತ್ರವಾದ ಮಾಸ್ತಿಯಲ್ಲೂ ಸ್ಥಳೀಯ ಮುಖಂಡರು ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ನಂಜೇಗೌಡ ಮಾಹಿತಿ ನೀಡಿದರು.























