Home ಜಿಲ್ಲೆ ಬೆಂಗಳೂರು ಕೆಪಿಸಿಸಿ ಖಜಾಂಚಿ ಜಿ.ಹೆಚ್. ನಾಗರಾಜ್ ನಾಳೆ ಪದಗ್ರಹಣ

ಕೆಪಿಸಿಸಿ ಖಜಾಂಚಿ ಜಿ.ಹೆಚ್. ನಾಗರಾಜ್ ನಾಳೆ ಪದಗ್ರಹಣ

ಚಿಕ್ಕಬಳ್ಳಾಪುರ, ನ. ೨೨- ಜಿಲ್ಲೆಯ ಹಿರಿಯ ಹಿಂದುಳಿದ ವರ್ಗಗಳ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಸದಸ್ಯ ಜಿ.ಹೆಚ್. ನಾಗರಾಜ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.


ಪಕ್ಷದ ಈ ಪ್ರಮುಖ ಹುದ್ದೆಗೆ ನೇಮಕಗೊಂಡ ಹಿನ್ನೆಲೆಯಲ್ಲಿ ಜಿ.ಹೆಚ್. ನಾಗರಾಜ್ ಅವರು ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ, ತಮ್ಮ ಮೇಲೆ ಭರವಸೆಯಿಟ್ಟು ಜವಾಬ್ದಾರಿ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.


ನಾಳೆ ಅಧಿಕಾರ ಸ್ವೀಕಾರ: ನೂತನ ಖಜಾಂಚಿಯಾಗಿ ನೇಮಕಗೊಂಡಿರುವ ಜಿ.ಹೆಚ್. ನಾಗರಾಜ್ ಅವರು ನಾಳೆ (ನ. ೨೩) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಬೆಳಗ್ಗೆ ೧೧.೩೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಈ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಪಕ್ಷದ ಹಲವು ರಾಜ್ಯ ಮಟ್ಟದ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ರಾಜ್ಯ ನಾಯಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಜಿ.ಹೆಚ್. ನಾಗರಾಜ್ ಅವರ ಪುತ್ರ ಹಾಗೂ ಕಾಂಗ್ರೆಸ್ ಯುವ ಮುಖಂಡ ಎನ್. ವಿನಯ್ ಶ್ಯಾಮ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.