
ಕುಣಿಗಲ್, ಜು. ೯- ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಶಾಸಕ ಡಾ. ಎಚ್ ಡಿ ರಂಗನಾಥ್ ರವರ ವೈದ್ಯಕೀಯ ವೃತ್ತಿ ಹಾಗೂ ಜೀನ್ಸ್ (ವಂಶವಾಹಿ) ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ತಾಲ್ಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರವರು ನದಿ ಮೂಲ, ಋಷಿ ಮೂಲ, ಹಾಗೂ ಜೀನ್ಸ್( ವಂಶವಾಹಿ ) ಮೂಲಗಳನ್ನು, ಹುಡುಕಬಾರದೆಂದು ಹಿರಿಯರ ಮಾತುಗಳನ್ನು ನಿಖಿಲ್ ಕುಮಾರಸ್ವಾಮಿ ಅವರು ಅರ್ಥಮಾಡಿಕೊಳ್ಳಬೇಕು ಎಂದರು.
ಬೇರೆಯವರ ಜೀನ್ಸ್ ಬಗ್ಗೆ ಮಾತನಾಡುವ ವ್ಯಕ್ತಿಗಳು ಮೊದಲು ತಮ್ಮ ವಂಶವಾಹಿಗಳ ನಡವಳಿಕೆಗಳು ಎಷ್ಟು ಕೆಟ್ಟದ್ದಾಗಿರುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಎಂದು ವ್ಯಂಗ್ಯ ಮಾಡಿದ್ದಾರೆ. ನಿಮ್ಮ ಕುಟುಂಬದ ಜೀನ್ಸ್ ಬಗ್ಗೆ ದಿವಂಗತ ಎ ಕೆ ಸುಬ್ಬಯ್ಯನವರು ಚರ್ಚೆ ಮಾಡಿ ರಾಷ್ಟ್ರ ವ್ಯಾಪಿ ಸುದ್ದಿಯಾಗಿದ್ದದ್ದನ್ನು ನೆನಪು ಮಾಡಿಕೊಳ್ಳಬೇಕು. ಪ್ರಜ್ವಲ್ ರೇವಣ್ಣ ನವರ ಪ್ರಕರಣ, ರಾಧಿಕಾ ಕುಮಾರಸ್ವಾಮಿ ವಿಚಾರ ರಾಜ್ಯ ವ್ಯಾಪಿ ಚರ್ಚೆಯಾಗಿದೆ. ಎಂದು ಮಾರ್ಮಿಕವಾಗಿ ಹೇಳಿದರು.
ಶಾಸಕ ಡಾ. ರಂಗನಾಥ್ ಸಾಮಾನ್ಯ ರೈತ ಕುಟುಂಬದಿಂದ ಬಂದು ವೃತ್ತಿಪರ ವೈದ್ಯರಾಗಿ ತಮ್ಮ ಸರಳ ವ್ಯಕ್ತಿತ್ವ ಸಜ್ಜನಿಕೆಯಿಂದ ಜನಪರ ಹಾಗೂ ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಮಾಡುತ್ತಾ ಗುರುತಿಸಿಕೊಂಡು ಜನಮನ ಗೆದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ರವರ ಮಾರ್ಗದರ್ಶನದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ವಿರೋಧಿಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡದೆ ನಿತ್ಯ ಕಾಯಕ ಯೋಗಿಯಾಗಿ ಜನಪರ ಹಾಗೂ ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಶಾಸಕರ ಬಗ್ಗೆ ಹಗುರವಾಗಿ ನಿಖಿಲ್ ಕುಮಾರಸ್ವಾಮಿ ಮಾತನಾಡಬಾರದು ಎಂದರು.
ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮನೆತನದ ಹಿನ್ನೆಲೆಯಿಂದ ಬಂದು ಅಧಿಕಾರದ ಹಾಗೂ ಹಣದ ದರ್ಪ ತಲೆಗೇರಿಸಿಕೊಂಡು ಅವಕಾಶವಾದಿ ರಾಜಕಾರಣ ಮಾಡುತ್ತಾ ಕೋಮುವಾದಿ ಪಕ್ಷವನ್ನು ವಿರೋಧಿಸುತ್ತಿದ್ದ ನೀವುಗಳು ಜಾತ್ಯಾತೀತ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರದ ಆಸೆಯಿಂದ ಬಿಜೆಪಿ ಪಕ್ಷದವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಇತರರ ಬಗ್ಗೆ ಕೀಳು ಹೇಳಿಕೆಗಳನ್ನು ನೀಡುತ್ತಾ ಶಾಸಕ ಸ್ಥಾನಕ್ಕೆ ನಿಂತು ಸತತವಾಗಿ ಸೋಲುಂಡು ಜನರಿಂದ ತಿರಸ್ಕಾರಕ್ಕೊಳಪಟ್ಟಿರುವ ಇವರು ಇದೇ ಚಾಳಿಯನ್ನು ಮುಂದುವರಿಸಿದರೆ ಜನತಾದಳ ಪಕ್ಷವು ಅವನತಿಯ ಹಾದಿ ಹಿಡಿಯುವುದಂತು ಸತ್ಯ ಎಂದರು.
ರಾಜ್ಯದ ಪ್ರಭಲ ಸಮುದಾಯವಾದ ಒಕ್ಕಲಿಗ ಸಮಾಜದ ಜನತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿರುವುದು ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಡಿ.ಕೆ. ಶಿವಕುಮಾರ್ ಕುಟುಂಬಸ್ಥರಾದ ಇವರ ಮೇಲೆ ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ನಿಖಿಲ್ ಕುಮಾರಸ್ವಾಮಿ ಅವರು ಶಾಸಕ ಡಾ. ಹೆಚ್. ಡಿ. ರಂಗನಾಥ್ ರವರಲ್ಲಿ ಕ್ಷಮೆ ಕೇಳಬೇಕೆಂದು ತಾಲ್ಲೂಕು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದು ಶಂಕರ್ ಹೇಳಿದ್ದಾರೆ.


































