Home ಮುಖಪುಟ ಸುದ್ದಿ ಅಕ್ರಮ ಓಎಫ್‌ಸಿ ಕೇಬಲ್‌ಗಳಿಗೆ ಕಡಿವಾಣ,ಸಕ್ರಮಕ್ಕೆ ಒನ್‌ಟೈಮ್ ಅವಕಾಶ ನೀಡಲು ಚಿಂತನೆ

ಅಕ್ರಮ ಓಎಫ್‌ಸಿ ಕೇಬಲ್‌ಗಳಿಗೆ ಕಡಿವಾಣ,ಸಕ್ರಮಕ್ಕೆ ಒನ್‌ಟೈಮ್ ಅವಕಾಶ ನೀಡಲು ಚಿಂತನೆ

ಬೆಂಗಳೂರು, ನ.೨೫-ಸಿಲಿಕಾರಣ್ಯದಲ್ಲಿ ಎಲ್ಲೆಂದರಲ್ಲಿ ನೇತಾಡುವ ಕೇಬಲ್‌ಗಳು, ರಸ್ತೆ ಬದಿಯಲ್ಲಿ ಹರಡಿಕೊಂಡಿರುವ ಅನಧಿಕೃತ ತಂತಿಗಳ ಹಾವಳಿಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳಿಗೆ (ಓಎಫ್‌ಸಿ) ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ನಿಗದಿತ ಗಡುವಿನೊಳಗೆ ಸಕ್ರಮಗೊಳಿಸದ ಕೇಬಲ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.


ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಓಎಫ್‌ಸಿ ಕೇಬಲ್‌ಗಳ ನಿರ್ವಹಣೆ ಮತ್ತು ನಿಯಂತ್ರಣ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕೇಬಲ್ ಅಳವಡಿಕೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಎಲ್ಲ ನಗರ ಪಾಲಿಕೆಗಳ ವ್ಯಾಪ್ತಿಯಲ್ಲೂ ಏಕರೂಪದ ನಿಯಮಗಳನ್ನು ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.

ನಗರದಲ್ಲಿ ೫ ಲಕ್ಷಕ್ಕೂ ಹೆಚ್ಚು ಅನಧಿಕೃತ ಓವರ್‌ಹೆಡ್ ಕೇಬಲ್‌ಗಳು ಹಾಗೂ ಸುಮಾರು ೧೨ ಸಾವಿರ ಕಿ.ಮೀ. ಉದ್ದದ ಅಕ್ರಮ ಭೂಗತ ಕೇಬಲ್‌ಗಳಿರುವುದು ವರದಿಯಾಗಿದೆ. ಇದರ ಜತೆಗೆ ೩,೪೬೦ ಕಿ.ಮೀ. ಉದ್ದದ ಓವರ್‌ಹೆಡ್ ಕೇಬಲ್‌ಗಳಿದ್ದು, ಮರಗಳ ಮೇಲೆ ೩೦ಕ್ಕೂ ಹೆಚ್ಚು ನಿರುಪಯುಕ್ತ ಕೇಬಲ್‌ಗಳು ನೇತಾಡುತ್ತಿವೆ. ಇವು ನಗರ ಸೌಂದರ್ಯಕ್ಕೆ ಧಕ್ಕೆ ತರುವುದರ ಜತೆಗೆ ಸಾರ್ವಜನಿಕರ ಸುರಕ್ಷತೆಗೂ ಅಪಾಯಕಾರಿಯಾಗಿವೆ.


ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಟೆಲಿಕಾಂ ಮತ್ತು ಇಂಟರ್‌ನೆಟ್ ಸೇವಾ ಸಂಸ್ಥೆಗಳಿಗೆ ತಮ್ಮ ಬಳಿ ಇರುವ ಅನಧಿಕೃತ ಕೇಬಲ್‌ಗಳನ್ನು ಘೋಷಿಸಿಕೊಂಡು, ಒಂದು ಬಾರಿಯ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಗುತ್ತಿಗೆದಾರರೊಂದಿಗೆ ಚರ್ಚಿಸಿ ನಿಗದಿತ ಕಾಲಾವಕಾಶ ನೀಡಲಾಗುವುದು. ಗಡುವು ಮುಗಿದ ಬಳಿಕವೂ ಸಕ್ರಮಗೊಳಿಸದ ಹಾಗೂ ಅಪಾಯಕಾರಿಯಾಗಿ ನೇತಾಡುವ ಕೇಬಲ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಓಎಫ್‌ಸಿ ಕೇಬಲ್ ಅಳವಡಿಕೆಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ನಗರ ಪಾಲಿಕೆಗಳ ಸಾಫ್ಟ್‌ವೇರ್ ಮೂಲಕ ಅರ್ಜಿ ಸಲ್ಲಿಸುವ ಸಂಸ್ಥೆಗಳಿಗೆ ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲೇ ಪಾವತಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ನಕಲಿ ಅನುಮತಿ ಪತ್ರಗಳ ಹಾವಳಿಗೆ ಕಡಿವಾಣ ಹಾಕಿ, ಅನುಮತಿ ನೀಡುವ ಮತ್ತು ಶುಲ್ಕ ಪಾವತಿಸುವ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಅನಧಿಕೃತವಾಗಿ ಕೇಬಲ್ ಅಳವಡಿಸಿರುವ ಸಂಸ್ಥೆಗಳಿಗೆ ನಿಯಮಾನುಸಾರ ಕ್ರಮಬದ್ಧಗೊಳಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಬೇಕು. ನಿಗದಿತ ಅವಧಿಯೊಳಗೆ ನಿಯಮ ಪಾಲಿಸದಿದ್ದರೆ ಸಂಬಂಧಪಟ್ಟ ನಗರ ಪಾಲಿಕೆಗಳೇ ಕೇಬಲ್‌ಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.

ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಯಾವುದೇ ಕಾರಣಕ್ಕೂ ಅಗೆಯಲು ಅನುಮತಿ ನೀಡಬಾರದು. ವೈಟ್ ಟಾಪಿಂಗ್ ಹಾಗೂ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಈಗಾಗಲೇ ನಿರ್ಮಿಸಿರುವ ಡಕ್ಟ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೇಬಲ್ ಜಂಕ್ಷನ್ ಬಾಕ್ಸ್‌ಗಳನ್ನು ಆಸ್ತಿಯ ಅಂಚಿನಲ್ಲಿ ಹಾಗೂ ಏಳು ಅಡಿ ಎತ್ತರದಲ್ಲಿ ಅಳವಡಿಸಬೇಕು ಎಂದು ಸೂಚಿಸಿದರು.


ಅಗತ್ಯವಿದ್ದಲ್ಲಿ ಪ್ರಸ್ತುತ ನಿಯಮಗಳಿಗೆ ತಿದ್ದುಪಡಿ ತಂದು, ಕೇಬಲ್ ಅಳವಡಿಕೆ ಮತ್ತು ನಿರ್ವಹಣೆಗೆ ಪ್ರತ್ಯೇಕ ಬೈಲಾ ರೂಪಿಸಿಕೊಳ್ಳುವಂತೆಯೂ ನಿರ್ದೇಶನ ನೀಡಿದರು.

ನಗರದ ರಸ್ತೆ ಸುರಕ್ಷತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿದ ಸಚಿವರು, ೭೫ ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳುವಂತೆ ಸೂಚಿಸಿದರು. ಕಾಮಗಾರಿ ಆರಂಭಿಸುವ ಮುನ್ನ ’ಗುಡ್ ಫಾರ್ ಕನ್ಸ್ಟ್ರಕ್ಷನ್’ (ಜಿಎಫ್‌ಸಿ) ಡ್ರಾಯಿಂಗ್‌ಗಳನ್ನು ಅಂತಿಮಗೊಳಿಸಬೇಕು. ರಸ್ತೆಗಳಲ್ಲಿ ಲೇನ್ ಮಾರ್ಕಿಂಗ್, ದಿಕ್ಕು ಸೂಚಕ ಫಲಕಗಳು, ಜೀಬ್ರಾ ಕ್ರಾಸಿಂಗ್, ಮರು ಡಾಂಬರೀಕರಣ, ಫ್ರೀ ಲೆಫ್ಟ್ ವ್ಯವಸ್ಥೆ, ರಿಫ್ಲೆಕ್ಟರ್‌ಗಳು ಹಾಗೂ ರಸ್ತೆ ಸ್ಟಡ್‌ಗಳನ್ನು ಸಮರ್ಪಕವಾಗಿ ಅಳವಡಿಸಬೇಕು ಎಂದು ತಿಳಿಸಿದರು.


ಸಂಚಾರ ದಟ್ಟಣೆ ಮತ್ತು ರಸ್ತೆ ಸುರಕ್ಷತೆಯ ಸಮಸ್ಯೆಗಳನ್ನು ಪರಿಹರಿಸಲು ಸಂಚಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಪೊಮ್ಮಲ ಸುನೀಲ್ ಕುಮಾರ್, ಶಿಲ್ಪಾ ನಾಗ್, ಕೆ.ಎನ್. ರಮೇಶ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಅಪರ ಆಯುಕ್ತರಾದ ವೆಂಕಟಾಚಲಪತಿ ಮತ್ತು ನವೀನ್ ಕುಮಾರ್ ರಾಜು, ಓಎಫ್‌ಸಿ ಅಧೀಕ್ಷಕ ಅಭಿಯಂತರ ಧರ್ಮಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.