Home ಜಿಲ್ಲೆ ಕಲಬುರಗಿ ಕೆಬಿಎನ್ ಗೋಲ್ಡ್ ಕಪ್ 2026: ಇಶಾನ್ ಪಾಠಕ್ ಅಮೋಘ ದ್ವಿಶತಕ; ಅಲ್-ಬರ್ಕಾತ್ ಶಾಲೆಗೆ 160 ರನ್‍ಗಳ...

ಕೆಬಿಎನ್ ಗೋಲ್ಡ್ ಕಪ್ 2026: ಇಶಾನ್ ಪಾಠಕ್ ಅಮೋಘ ದ್ವಿಶತಕ; ಅಲ್-ಬರ್ಕಾತ್ ಶಾಲೆಗೆ 160 ರನ್‍ಗಳ ಭರ್ಜರಿ ಜಯ

ಕಲಬುರಗಿ: ನಗರದ ಸಂತ್ರಾಸವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ‘ಕೆಬಿಎನ್ ಗೋಲ್ಡ್ ಕಪ್ 2026’ 50 ಓವರ್‍ಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರಂಭಿಕ ಆಟಗಾರ ಇಶಾನ್ ಪಾಠಕ್ ಸಿಡಿಸಿದ ಅಮೋಘ ದ್ವಿಶತಕದ (206 ರನ್) ನೆರವಿನಿಂದ ಅಲ್-ಬರ್ಕಾತ್ ಶಾಲೆ ತಂಡವು, ಜಸ್ಟ್ ಕ್ರಿಕೆಟ್ ಅಕಾಡೆಮಿ ವಿರುದ್ಧ 160 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಡಾ. ಶಿವರಂಜನ್ ಸತ್ಯಂಪೇಟೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಟಾಸ್ ಚಿಮ್ಮಿಸಿದರು. ಟಾಸ್ ಗೆದ್ದ ಅಲ್-ಬರ್ಕಾತ್ ಶಾಲೆ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಮೊದಲು ಬ್ಯಾಟ್ ಮಾಡಿದ ಅಲ್-ಬರ್ಕಾತ್ ಶಾಲೆ ನಿಗದಿತ 50 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 370 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರ ಅಬ್ಬರಿಸಿದ ಆರಂಭಿಕ ಆಟಗಾರ ಇಶಾನ್ ಪಾಠಕ್ ಕೇವಲ 153 ಎಸೆತಗಳಲ್ಲಿ 14 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್‍ಗಳ ನೆರವಿನಿಂದ 206 ರನ್ ಚಚ್ಚಿದರು. ಇಶಾನ್ ಅವರಿಗೆ ಉತ್ತಮ ಸಾಥ್ ನೀಡಿದ ಶುಭಂ ಜೈಸ್ವಾಲ್ (40 ಎಸೆತಗಳಲ್ಲಿ 48 ರನ್) ಮೊದಲ ವಿಕೆಟ್‍ಗೆ 87 ರನ್‍ಗಳ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿದರು. ಬಳಿಕ ಇಶಾನ್ ಮತ್ತು ಅಥರ್ವ ಸಿಂಗ್ (59 ಎಸೆತಗಳಲ್ಲಿ 51 ರನ್) 3ನೇ ವಿಕೆಟ್‍ಗೆ 150 ರನ್‍ಗಳ ಅಮೋಘ ಜೊತೆಯಾಟವಾಡಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು. ಜಸ್ಟ್ ಕ್ರಿಕೆಟ್ ಅಕಾಡೆಮಿ ಪರ ರಿತ್ವಿಕ್ ಕೆ (52ಕ್ಕೆ 2), ಚೆರಿಶ್ (60ಕ್ಕೆ 2) ಹಾಗೂ ನಾಯಕ ಶ್ರೀಹರಿಸಿಂಗ್ ಪಿ. ರಜಪೂತ್ (63ಕ್ಕೆ 2) ತಲಾ ಎರಡು ವಿಕೆಟ್ ಪಡೆದರು.
ಕಠಿಣ ಗುರಿ ಬೆನ್ನಟ್ಟಿದ ಜಸ್ಟ್ ಕ್ರಿಕೆಟ್ ಅಕಾಡೆಮಿ ತಂಡವು ಅಲ್-ಬರ್ಕಾತ್ ಬೌಲರ್‍ಗಳ ಬಿಗಿ ದಾಳಿಗೆ ತತ್ತರಿಸಿ ಆರಂಭಿಕ ಆಘಾತ ಅನುಭವಿಸಿತು. ದಕ್ಷತಾ ಎ. ಗೌಡ (35 ರನ್) ಉತ್ತಮ ಆರಂಭ ಪಡೆದರೂ, ಅಲೇಖ್ ಸಿಂಗ್ (24ಕ್ಕೆ 2) ಅವರ ಮಾರಕ ದಾಳಿಯಿಂದಾಗಿ ತಂಡ 14 ಓವರ್‍ಗಳಲ್ಲಿ 78 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ 6ನೇ ವಿಕೆಟ್‍ಗೆ ಜೊತೆಯಾದ ಗಣೇಶ್ ಗೊಲ್ಲರ್ (103 ಎಸೆತಗಳಲ್ಲಿ 49 ರನ್) ಹಾಗೂ ಆದಿಶ್ ಪ್ರತಾಪ್ ಸಿಂಗ್ ಠಾಕೂರ್ (56 ಎಸೆತಗಳಲ್ಲಿ 36 ರನ್) 74 ರನ್‍ಗಳ ಜೊತೆಯಾಟವಾಡಿ ಪ್ರತಿರೋಧ ಒಡ್ಡಿದರು. ಇದಕ್ಕೆ 42 ಇತರೆ (ಎಕ್ಸ್‍ಟ್ರಾ) ರನ್‍ಗಳ ನೆರವೂ ಸಿಕ್ಕಿತು. ಆದರೆ, ಹಾರ್ದಿಕ್ ಕುಮಾರ್ (17ಕ್ಕೆ 3) ಕೆಳ ಕ್ರಮಾಂಕದ ಬ್ಯಾಟರ್‍ಗಳನ್ನು ಕಟ್ಟಿಹಾಕಿದರೆ, ಆದಿತ್ಯ ಪಾಂಡೆ (27ಕ್ಕೆ 2) ಅಂತಿಮ ವಿಕೆಟ್ ಪಡೆದು ಎದುರಾಳಿ ತಂಡವನ್ನು 49.1 ಓವರ್‍ಗಳಲ್ಲಿ 210 ರನ್‍ಗಳಿಗೆ ಆಲೌಟ್ ಮಾಡಿದರು.
ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಲಿಯಾಸ್ ಸೇಠ್ ಬಾಗವಾನ್ ಮಾತನಾಡಿ, ಅಂತಾರಾಷ್ಟ್ರೀಯ ಕ್ರೀಡಾಂಗಣದ ಮಾದರಿಯಲ್ಲಿ ಸುಸಜ್ಜಿತ ಟರ್ಫ್ ಮೈದಾನ ನಿರ್ಮಿಸಿರುವ ಆಯೋಜಕರ ಕಾರ್ಯವನ್ನು ಶ್ಲಾಘಿಸಿದರು. ಹೊನಲು ಬೆಳಕಿನಲ್ಲಿ (ಫ್ಲಡ್ ಲೈಟ್ಸ್) ಆಟಗಾರರ ಮೊದಲ ಪ್ರದರ್ಶನ ನೋಡಿ ಮಂತ್ರಮುಗ್ಧನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳ ಮೂಲಕ ಹುರಿದುಂಬಿಸಿದರು.
ಅಮೋಘ ದ್ವಿಶತಕ ಸಿಡಿಸಿದ ಇಶಾನ್ ಪಾಠಕ್ ಅವರಿಗೆ ‘ಪಂದ್ಯಶ್ರೇಷ್ಠ’ (ಮ್ಯಾನ್ ಆಫ್ ದಿ ಮ್ಯಾಚ್) ಪ್ರಶಸ್ತಿಯೊಂದಿಗೆ 2,500 ರೂ. ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿದರು.