Home ಮುಖಪುಟ ಸುದ್ದಿ ೧೧.೭೪ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ಮೂವರ ಬಂಧನ

೧೧.೭೪ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ಮೂವರ ಬಂಧನ

ಬೆಂಗಳೂರು,ನ. ೨೫- ನಿಷೇಧಿತ ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಯಲಹಂಕ ಉಪನಗರ ಹಾಗೂ ಭಾರತಿನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೧೧.೭೪ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.


ಬಂಧಿತ ಆರೋಪಿಗಳಿಂದ ೧೧.೭೪ ಕೋಟಿ ಮೌಲ್ಯದ ೫ ಕೆಜಿ ೮೭೦ ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಮುಖ್ಯ ಆಯುಕ್ತ ಆರ್.ಹಿತೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಯಲಹಂಕ ಉಪನಗರ ಪೊಲೀಸರು ಗಂಗೊಂಡನಹಳ್ಳಿಯ ಇಮ್ರಾನ್ ಪಾಷ(೨೮) ಹೊಸಕೋಟೆಯ ನಿಸರ್ಗ ಲೇಔಟ್‌ನ ಆಯಿಷಾ ಸಿದ್ಧಿಕಿ(೨೭)ನನ್ನು ಬಂಧಿಸಿ ೧೧.೪೪ ಕೋಟಿ ಮೌಲ್ಯದ ೫ ಕೆಜಿ ೮೭೦ ಗ್ರಾಂ ಎಂಡಿಎಂಎ ಜಪ್ತಿ ಮಾಡಿದ್ದಾರೆ ಎಂದು ಹೇಳಿದರು.


ಭಾರತಿನಗರ ಪೊಲೀಸರು ಕೆಜಿಹಳ್ಳಿಯ ವಿನೋಬಾನಗರದ ಶೇಖ್ ಮುದಾಸಿರ್ ಅಲಿಯಾಸ್ ಮುದಾಸಿರ್(೩೮)ನನ್ನು ಬಂಧಿಸಿ
೩೦ ಲಕ್ಷ ಮೌಲ್ಯದ ೧೫೦.೪೩ ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.


ಬಂಧಿತ ಆರೋಪಿಗಳು ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.


ಬಂಧಿತ ಮೂವರು ಆರೋಪಿಗಳನ್ನು ವಿವಿಧ ದಿನಾಂಕಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ


ಆರೋಪಿಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಪೊಲೀಸ್ ಆಯುಕ್ತರಾದ ಎಂ.ಬಿ. ಬೋರಲಿಂಗಯ್ಯ, ಲಾಭು ರಾಮ್ ಮಾರ್ಗದರ್ಶನದಲ್ಲಿ ಈಶಾನ್ಯ ವಿಭಾಗದ ಜಿ.ಕೆ. ಮಿಥುನ್ ಕುಮಾರ್ ಹಾಗೂ ಇಂದಿರಾನಗರ ವಿಭಾಗದ ಚೆನ್ನಬಸವಣ್ಣ ಲಂಗೋಟಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು.