Home ಜಿಲ್ಲೆ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ: ಮೂರು ಪ್ರಶಸ್ತಿಗಳನ್ನು ಬಾಚಿಕೊಂಡ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗ

ಶರಣಬಸವ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ: ಮೂರು ಪ್ರಶಸ್ತಿಗಳನ್ನು ಬಾಚಿಕೊಂಡ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ನಾಲ್ಕು ದಿನಗಳ ವಾರ್ಷಿಕ ಕ್ರೀಡಾಕೂಟದ ಎರಡನೇ ದಿನವಾದ ಮಂಗಳವಾರ ನಡೆದ ನಾಲ್ಕು ಸ್ಪರ್ಧೆಗಳ ಪೈಕಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (ಸಿಎಸ್‍ಇ) ವಿಭಾಗದ ಪುರುಷ ಮತ್ತು ಮಹಿಳಾ ತಂಡಗಳು ಮೂರು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿವೆ.
ಸಿಎಸ್‍ಇ ವಿಭಾಗದ ಪುರುಷರ ತಂಡ ಬ್ಯಾಡ್ಮಿಂಟನ್ (ಡಬಲ್ಸ್) ಸ್ಪರ್ಧೆಯಲ್ಲಿ ಬಿ.ಎಸ್ಸಿ (ಆನರ್ಸ್) ತಂಡವನ್ನು 15-5 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದೇ ವಿಭಾಗದ ಮಹಿಳಾ ತಂಡ ಥ್ರೋಬಾಲ್ ಸ್ಪರ್ಧೆಯಲ್ಲಿ ಬಿ.ಟೆಕ್ ತಂಡವನ್ನು 15-10, 7-15, 15-13 ಅಂಕಗಳ ಅಂತರದಿಂದ ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಇದರೊಂದಿಗೆ ಸಿಎಸ್‍ಇ ವಿಭಾಗದ ಪುರುಷರ ತಂಡ ಕಬಡ್ಡಿ ಸ್ಪರ್ಧೆಯಲ್ಲಿಯೂ ಪ್ರಾಬಲ್ಯ ಮೆರೆದು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ತಂಡವನ್ನು 14-8 ಅಂಕಗಳಿಂದ ಸೋಲಿಸಿ ಮೂರನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಇನ್ನೊಂದು ನಿರ್ಣಾಯಕ ಪಂದ್ಯದಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ (ಇಸಿಇ) ವಿಭಾಗದ ಮಹಿಳಾ ತಂಡ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡೇಟಾ ಸೈನ್ಸ್ ವಿಭಾಗದ ತಂಡವನ್ನು 21-10 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.