Home ಮುಖಪುಟ ಸುದ್ದಿ ಜಪಾನ್ ವಿದೇಶಾಂಗ ಸಚಿವರ ಜೊತೆ ಡಿಕೆಶಿ ಮಾತುಕತೆ

ಜಪಾನ್ ವಿದೇಶಾಂಗ ಸಚಿವರ ಜೊತೆ ಡಿಕೆಶಿ ಮಾತುಕತೆ

ಟೋಕಿಯ (ಜಪಾನ್), ನ.೨೫-ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಯಸುತಾಕಾ ನಕಸೋನ್ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದರು.

ಜಪಾನ್ ಮತ್ತು ಕರ್ನಾಟಕದ ನಡುವಿನ ಆರ್ಥಿಕ ಸಹಕಾರ ಹಾಗೂ ದ್ವಿಪಕ್ಷೀಯ ಸಹಭಾಗಿತ್ವವನ್ನು ಬಲಪಡಿಸುವ ಅಗತ್ಯವನ್ನು ಹಾಗೂ ಕರ್ನಾಟಕದಲ್ಲಿ ಜಪಾನ್ ಹೂಡಿಕೆಗಳನ್ನು ಉತ್ತೇಜಿಸಲು ಸರ್ಕಾರ ಬದ್ದವಾಗಿದೆ ಎಂಬುದನ್ನು ಸಿಎಂ ಒತ್ತಿ ಹೇಳಿದರು.

ಮುಂದಿನ ತಿಂಗಳು ನಡೆಯುವ ’ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ ೨೦೨೭’ ರಲ್ಲಿ ’ಜಪಾನ್ ಕಂಟ್ರಿ ಪೆವಿಲಿಯನ್’ ಜೊತೆಗೆ ಭಾಗವಹಿಸುವಂತೆ ಜಪಾನ್ ಸರ್ಕಾರದ ಉನ್ನತ ಮಟ್ಟದ ನಿಯೋಗವನ್ನು ಸಿಎಂ ಆಹ್ವಾನ ನೀಡಿದರು.

ಬೆಂಗಳೂರು ಮೆಟ್ರೋ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಜಪಾನ್ ನೀಡುತ್ತಿರುವ ನಿರಂತರ ಬೆಂಬಲಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ ಸಿಎಂ, ’ಕರ್ನಾಟಕದ ಅಭಿವೃದ್ಧಿ ಆದ್ಯತೆಗಳಿಗೆ ಜಪಾನ್ ಸರ್ಕಾರ ಸಹಕಾರವನ್ನು ವಿಸ್ತರಿಸುವಂತೆ ಸಹಕಾರ ಕೋರಿದರು.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಯಸುತಾಕಾ ನಕಸೋನ್ ಭಾರತ-ಜಪಾನ್ ನಡುವಿನ ನಿರಂತರ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ’ಕರ್ನಾಟಕ ಜಪಾನ್ ಹೂಡಿಕೆಗಳಿಗೆ ಪ್ರಮುಖ ತಾಣವಾಗಿದೆ. ಜಪಾನ್ ಮತ್ತು ಕರ್ನಾಟಕದ ನಡುವಿನ ನಿರಂತರ ಸಹಭಾಗಿತ್ವ ವ್ಯವಹಾರಿಕ ಅಭಿವೃದ್ಧಿ ಮೈಲಿಗಲ್ಲು’ ಎಂದು ಶ್ಲಾಘಿಸಿದರು.