Home Lead News ೨೮ ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ!

೨೮ ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ!

*ಜೇಕ್ ಫ್ರೇಸರ್-ಮೆಕ್‌ಗುರ್ಕ್ ದಾಖಲೆ ಪತನ; *೧೫ ಸಿಕ್ಸರ್, ೪ ಬೌಂಡರಿ ಸಿಡಿಸಿದ ೧೫ ವರ್ಷದ ಯುವ ಆಟಗಾರ

ದೋಹಾ: ಕ್ರಿಕೆಟ್ ಜಗತ್ತೇ ಬೆರಗಾಗುವಂತಹ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ, ಕೇವಲ ೨೮ ಎಸೆತಗಳಲ್ಲಿ ಶತಕ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಯುಎಇ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯದಲ್ಲಿ ಭಾರತ ’ಎ’ ತಂಡದ ಪರ ಕಣಕ್ಕಿಳಿದ ೧೫ ವರ್ಷದ ವೈಭವ್, ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ ೨೮ ಎಸೆತಗಳಲ್ಲಿ ಶತಕದ ಗಡಿ ದಾಟಿದ ಅವರು, ತಮ್ಮ ಸ್ಫೋಟಕ ಆಟದ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶತಕದ ಇನ್ನಿಂಗ್ಸ್‌ನಲ್ಲಿ ವೈಭವ್ ಬರೋಬ್ಬರಿ ೧೫ ಸಿಕ್ಸರ್ ಹಾಗೂ ೪ ಬೌಂಡರಿಗಳನ್ನು ಬಾರಿಸಿದರು. ಇನಿಂಗ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು, ಚೇಸಿಂಗ್‌ನ ಮೊದಲ ಓವರ್‌ನಲ್ಲೇ ಮೂರು ಸಿಕ್ಸರ್‌ಗಳನ್ನು ಸಿಡಿಸಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದರು.

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಬಳಿಕ ಪ್ರಭ್‌ಸಿಮ್ರನ್ ಸಿಂಗ್ ವಿಕೆಟ್ ಕಳೆದುಕೊಂಡರೂ ವೈಭವ್ ತಮ್ಮ ಆಕ್ರಮಣಕಾರಿ ಆಟವನ್ನು ಕೈಬಿಡಲಿಲ್ಲ. ಎದುರಾಳಿ ತಂಡದ ಬೌಲರ್‌ಗಳ ಮೇಲೆ ನಿರಂತರವಾಗಿ ಸವಾರಿ ಮಾಡಿದರು. ಅವರ ಈ ಸ್ಫೋಟಕ ಆಟದಿಂದ ಭಾರತ ’ಎ’ ತಂಡವೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ತಂಡದ ಶತಕ ದಾಖಲಿಸಿದ ಹೊಸ ಸಾಧನೆ ಮಾಡಿತು.

ಮೂರು ವರ್ಷಗಳ ದಾಖಲೆ ಪತನ

ಇದುವರೆಗೆ ದಕ್ಷಿಣ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಹೆಸರಿನಲ್ಲಿ ಅತ್ಯಂತ ವೇಗದ ಲಿಸ್ಟ್ ಎ ಶತಕದ ದಾಖಲೆ ಇತ್ತು. ೨೦೨೩ರಲ್ಲಿ ಅಡಿಲೇಡ್‌ನಲ್ಲಿ ಟ್ಯಾಸ್ಮೇನಿಯಾ ವಿರುದ್ಧ ನಡೆದ ಮಾರ್ಷ್ ಕಪ್ ಪಂದ್ಯದಲ್ಲಿ ಅವರು ೨೯ ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ೨೮ ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ವೈಭವ್ ಆ ದಾಖಲೆಯನ್ನು ಮುರಿದಿದ್ದಾರೆ.

ಭಾರತೀಯ ಆಟಗಾರರ ಪೈಕಿ ಈ ಹಿಂದೆ ಬಿಹಾರದ ಸಕಿಬುಲ್ ಗನಿ ಹೆಸರಿನಲ್ಲಿ ವೇಗದ ಶತಕದ ದಾಖಲೆ ಇತ್ತು. ೨೦೨೫-೨೬ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಅವರು ೩೨ ಎಸೆತಗಳಲ್ಲಿ ಶತಕ ಬಾರಿಸಿದ್ದರು. ಜಾರ್ಖಂಡ್‌ನ ಇಶಾನ್ ಕಿಶನ್ ೩೩ ಎಸೆತಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದರು.

ವೇಗದ ಲಿಸ್ಟ್ ಎ ಶತಕದ ದಾಖಲೆ ಆಟಗಾರ
ಶತಕಕ್ಕೆ ತೆಗೆದುಕೊಂಡ ಎಸೆತ
ವೈಭವ್ ಸೂರ್ಯವಂಶಿ ೨೮
ಜೇಕ್ ಫ್ರೇಸರ್-ಮೆಕ್‌ಗುರ್ಕ್ ೨೯
ಎಬಿ ಡಿವಿಲಿಯರ್ಸ್ ೩೧
ಸಕಿಬುಲ್ ಗನಿ ೩೨
ಇಶಾನ್ ಕಿಶನ್ ೩೩

೧೫೦ ರನ್‌ಗಳಲ್ಲೂ ಹೊಸ ದಾಖಲೆ

ಶತಕ ಬಾರಿಸಿದ ಬಳಿಕವೂ ವೈಭವ್ ಅವರ ಅಬ್ಬರ ನಿಲ್ಲಲಿಲ್ಲ. ದೋಹಾದ ಯೂನಿವರ್ಸಿಟಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಮೈದಾನದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ಅವರು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ೧೫೦ ರನ್ ಪೂರೈಸಿದ ದಾಖಲೆಯನ್ನೂ ನಿರ್ಮಿಸಿದರು.

ಇದಕ್ಕೂ ಮೊದಲು ಬಿಹಾರದ ಪರ ಅರುಣಾಚಲ ಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿಯಲ್ಲಿ ೫೯ ಎಸೆತಗಳಲ್ಲಿ ೧೫೦ ರನ್ ಗಳಿಸಿದ್ದು ಅವರ ಹಿಂದಿನ ದಾಖಲೆಯಾಗಿತ್ತು. ಇದೀಗ ತಮ್ಮದೇ ದಾಖಲೆಯನ್ನು ಮುರಿದು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

೧೫ನೇ ವಯಸ್ಸಿನಲ್ಲೇ ವಿಶ್ವ ಕ್ರಿಕೆಟ್‌ನ ದಾಖಲೆ ಪುಸ್ತಕದಲ್ಲಿ ಹೆಸರು ದಾಖಲಿಸಿರುವ ವೈಭವ್ ಸೂರ್ಯವಂಶಿ ಅವರ ಈ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಭಾರತದ ಭವಿಷ್ಯದ ಪ್ರತಿಭೆ ಎಂಬ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

೪.೨ ಓವರ್‌ಗಳಲ್ಲೇ ೨೫೦ ರನ್ ಗುರಿ ಬೆನ್ನಟ್ಟಿದ ಭಾರತ ’ಎ’
ವೈಭವ್ ಅವರ ಅಬ್ಬರದ ನೆರವಿನಿಂದ ಭಾರತ ’ಎ’ ತಂಡ ೨೫೦ ರನ್‌ಗಳ ಗುರಿಯನ್ನು ಕೇವಲ ೧೪.೨ ಓವರ್‌ಗಳಲ್ಲೇ ಬೆನ್ನಟ್ಟಿ ಭರ್ಜರಿ ಗೆಲುವು ದಾಖಲಿಸಿತು. ವೈಭವ್ ಒಟ್ಟು ೨೦೪ ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಯುಎಇ ತಂಡ, ಆರಂಭಿಕ ಆಘಾತಗಳ ನಡುವೆಯೂ ಹರ್ಪ್ರೀತ್ ಸಿಂಗ್ ಭಾಟಿಯಾ ಅವರ ಶತಕದ ನೆರವಿನಿಂದ ನಿಗದಿತ ಮೊತ್ತವನ್ನು ಕಲೆಹಾಕಿತು. ಭಾಟಿಯಾ ೧೩೦ ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಯುಎಇ ೨೪೯ ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಭಾರತದ ಪರ ಅರ್ಷದ್ ಖಾನ್ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು.
೨೫೦ ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ನೀಡಿದರು. ಕೇವಲ ೧೬ ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಮತ್ತೊಂದೆಡೆ ಅಭಿಷೇಕ್ ಶರ್ಮಾ ೧೨ ರನ್ ಗಳಿಸಿ ವಿಕೆಟ್ ಒಪ್ಪಿಸಿದರೂ ವೈಭವ್ ಆಟದ ವೇಗ ಮಾತ್ರ ಕಡಿಮೆಯಾಗಲಿಲ್ಲ.
ಸಿಕ್ಸರ್‌ಗಳ ಸುರಿಮಳೆಗೈದ ವೈಭವ್, ಕೇವಲ ೫೨ ಎಸೆತಗಳಲ್ಲಿ ದ್ವಿಶತಕದ ಗಡಿ ದಾಟಿದರು. ಈ ಮೂಲಕ ತಮ್ಮದೇ ಆದ ಹಲವು ದಾಖಲೆಗಳನ್ನು ಮುರಿದ ಅವರು, ಲಿಸ್ಟ್ ಎ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದರು.

ಭಾರತಕ್ಕೆ ಮಹತ್ವದ ಗೆಲುವು
ಪಾಕಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ತಿಲಕ್ ವರ್ಮಾ ನಾಯಕತ್ವದ ಭಾರತ ’ಎ’ ತಂಡಕ್ಕೆ ಈ ಗೆಲುವು ಮಹತ್ವದ್ದಾಗಿದೆ. ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ತಂಡಕ್ಕೆ ಈ ಪಂದ್ಯ ನಿರ್ಣಾಯಕವಾಗಿತ್ತು. ಯುಎಇ ತಂಡ ಈ ಟೂರ್ನಿಯಲ್ಲಿ ಈಗಾಗಲೇ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ ಸೋಲು ಕಂಡಿತ್ತು.

ವೈಭವ್ ಅವರ ದಾಖಲೆಯ ದ್ವಿಶತಕದಿಂದಾಗಿ ಭಾರತ ’ಎ’ ತಂಡ ಕೇವಲ ೧೪.೨ ಓವರ್‌ಗಳಲ್ಲಿ ಗುರಿ ತಲುಪಿದ್ದು, ಪಂದ್ಯವನ್ನು ಏಕಪಕ್ಷೀಯವಾಗಿ ತನ್ನದಾಗಿಸಿಕೊಂಡಿತು. ಯುವ ಆಟಗಾರನ ಈ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.