
ಕೋಲಾರ,ಜು.೨೧- ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ವತಿಯಿಂದ ಹೊಸ ಬಡಾವಣೆ ನಿರ್ಮಾಣಕ್ಕಾಗಿ ರೈತರ ಜಮೀನು ಪಡೆಯುವ ಸಂಬಂಧ ರೈತರ ಅಭಿಪ್ರಾಯ ಸಂಗ್ರಹಿಸಲು ಇನ್ನೂ ಎರಡು ತಿಂಗಳ ಕಾಲಾವಕಾಶ ನೀಡಲಾಗುವುದು. ಬಳಿಕ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರ ಹೊರವಲಯದ ಕುಡಾ ಕಚೇರಿ ಬಳಿ ಸೋಮವಾರ ಟಮಕ, ಗಾಂಧಿನಗರ, ಗದ್ದೆಕಣ್ಣೂರು, ಹಾಗೂ ಅಮಾನಿಕೆರೆ ಭಾಗದಲ್ಲಿನ ಜಮೀನುಗಳ ರೈತರೊಂದಿಗೆ ನಡೆಸಿದ ಚರ್ಚೆಯ ಸಭೆಯಲ್ಲಿ ಮಾತನಾಡಿದ ಅವರು, ರೈತರಿಂದ ಯಾವುದೇ ರೀತಿಯ ಬಲವಂತದ ಭೂಸ್ವಾಧೀನ ಮಾಡುವುದಿಲ್ಲ ನಿಮಗೆ ಮಾಹಿತಿ ಕೊಟ್ಟು,ನಿಮ್ಮ ಸಮ್ಮತಿ ಪಡೆಯಲು ಸಭೆ ಮಾಡುತ್ತಿದ್ದೇವೆ, ಕೆಲವರು ಜಮೀನು ನೀಡಲು ಒಪ್ಪಿದ್ದಾರೆ, ಇನ್ನೂ ಕೆಲವರು ಒಪ್ಪಿಗೆ ನೀಡಲಿಲ್ಲ ಇದು ಮೊದಲ ಸಭೆಯಾಗಿದ್ದು, ರೈತರು ಚರ್ಚಿಸಿ ಸೂಕ್ತ ನಿರ್ಧಾರ ತಿಳಿಸಲು ೨ ತಿಂಗಳ ಕಾಲಾಕಾಶವನ್ನು ನೀಡಲಾಗಿದೆ ಎಂದು ಹೇಳಿದರು.
ಈ ಭಾಗದಲ್ಲಿ ಸುಮಾರು ೧೬೭ ಎಕರೆ ಜಮೀನನ್ನು ಗುರುತಿಸಲಾಗಿದೆ ರೈತರಿಂದ ೫೦:೫೦ ಅನುಪಾತದಲ್ಲಿ ಭೂಮಿ ಪಡೆಯುವುದು ಅಥವಾ ನೇರವಾಗಿ ಖರೀದಿ ಪ್ರಕ್ರಿಯೆ ಮೂಲಕವಾಗಿ ಹೊಸ ಬಡಾವಣೆ ಅಭಿವೃದ್ಧಿ ಪಡಿಸುವಂತ ಎರಡೂ ಅವಕಾಶಗಳಿವೆ. ಈಗಾಗಲೇ ಕುಡಾ ಬಳಿ ಸುಮಾರು ೩೩೩ ನಿವೇಶನಗಳಿದ್ದು, ಅವುಗಳಲ್ಲಿ ೫೬ ನಿವೇಶನಗಳ ಹರಾಜಿಗೆ ಅನುಮೋದನೆ ದೊರೆತಿದೆ. ಹರಾಜಿನಿಂದ ಬರುವ ಆದಾಯ ಸೇರಿದಂತೆ ಇತರೆ ಎಲ್ಲಾ ಸೇರಿ ರೂ ೩೦೦ ಕೋಟಿ ಹಣ ಇದ್ದು ಅದರಲ್ಲಿ ಹೊಸ ಬಡಾವಣೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಟಮಕ ವೆಂಕಟೇಶ್ ಮಾತನಾಡಿ ರೈತರುಗಳು ತಮ್ಮ ಕೃಷಿ ಜಮೀನುಗಳನ್ನು ಯಾವುದೇ ಕಾರಣಕ್ಕೂ ನೀಡಲು ಸಿದ್ದವಿಲ್ಲ. ಈ ಹಿಂದೆ ಕೋಲಾರ ನಗರದ ಅಭಿವೃದ್ದಿಗಾಗಿ ರೈತರಿಂದ ಜಮೀನುಗಳು ಪಡೆದು ಕೊಂಡು ನುಡಿದಂತೆ ನಡೆದು ಕೊಳ್ಳದೆ ರೈತರು ವಂಚಿತರಾಗುವಂತೆ ಮಾಡಲಾಗಿದೆ ಎಂದು ಹಂತ ಹಂತವಾಗಿ ವಿವರಿಸಿದರು.
ಗಾಂಧಿನಗರ ನಾರಾಯಣಸ್ವಾಮಿ, ,ದಲಿತ ನಾರಾಯಣಸ್ವಾಮಿ.ಸಾ.ಮ.ಪ್ರಸನ್ನ. ಸೇರಿದಂತೆ ಇತರೆ ರೈತರು ಮಾತನಾಡಿ ಈಗಾಗಲೇ ಚನ್ನಪಟ್ಟಣ, ಬಿಡದಿಗಳಲ್ಲಿ ನಡೆಯುತ್ತಿರುವ ಪ್ರಕರಣಗಳ ಕುರಿತು ವಿವರಿಸಿ ಇದೇ ರೀತಿ ಕೋಲಾರದಲ್ಲಿ ಅಗುವುದು ಬೇಕಾಗಿಲ್ಲ ಎಂದು ಪ್ರತಿಪಾದಿಸಿದ ಅವರುಗಳು ಮುಂದೆ ಮತ್ತೊಂದು ಬಾರಿ ಈ ಭಾಗದಲ್ಲಿ ಜಮೀನುಗಳಿಗಾಗಿ ಕುಡಾ ಸಭೆಯನ್ನು ನಡೆಸುವಂತ ಅಗತ್ಯವಿಲ್ಲ. ರೈತರು ತಮ್ಮ ಜಮೀನುಗಳನ್ನು ನೀಡುವುದಿಲ್ಲವೆಂದು ಈಗಾಗಲೇ ಸ್ವಷ್ಟವಾಗಿ ತೀರ್ಮಾನಿಸಿದ್ದಾರೆ ಎಂದು ಸಭೆಯ ನಡುವಳಿಯಲ್ಲಿ ದಾಖಲಿಸಿ ಕೊಳ್ಳಿ ಎಂದು ಒತ್ತಾಯಿಸಿದರು.
ಕೋಲಾರ ನಗರಾಭಿವೃದ್ದಿಗೆ- ರೈತರ ಸಹಕಾರಕ್ಕೆ ಮನವಿ
ಇದಕ್ಕೂ ಮುನ್ನ ವಿಧಾನ ಪರಿಷತ್ ಶಾಸಕ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಕೋಲಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳು ವೇಗವಾಗಿ ವಿಸ್ತರಿಸುತ್ತಿವೆ. ಕಳೆದ ೩೦ ವರ್ಷಗಳಿಂದ ಹೊಸ ಬಡಾವಣೆ ನಿರ್ಮಾಣವಾಗಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ಮೂಲ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸ ಬಡಾವಣೆ ಅಗತ್ಯವಾಗಿದೆ ಅದು ರೈತರ ಒಪ್ಪಿಗೆ ಪಡೆದು ನಿರ್ಮಾಣ ಮಾಡಲಾಗುತ್ತದೆ ಇದಕ್ಕೆ ಎಲ್ಲಾ ರೈತರು ಸಹಕಾರ ನೀಡಲು ಕುಡಾದೊಂದಿಗೆ ಕೈ ಜೋಡಿಸಲು ಮನವಿ ಮಾಡಿದರು.
ಸಭೆಯಲ್ಲಿ ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ತಹಶೀಲ್ದಾರ್ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲ ಹಳ್ಳಿ ಮುನಿರಾಜು, ವೇಮಗಲ್-ನರಸಾಪುರ ಪ್ರಾಧಿಕಾರದ ಅಧ್ಯಕ್ಷ ಉರಟಿ ಅಗ್ರಹಾರ ಚೌಡರೆಡ್ಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಕುಮಾರ್, ಕುಡಾ ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ. ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನಗರಸಭೆ ಮಾಜಿ ಸದಸ್ಯ ಆಪ್ಸರ್, ಜಾಫರ್, ಹಿರಿಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕುಡಾ ಸದಸ್ಯರಾದ ಬಿ.ಟಿ. ಮಂಜುನಾಥ್, ಅನಿಲ್ ಐಯ್ಯ, ಕಿಲಾರಿಪೇಟೆ ಮಣಿ, ಜ್ಯೋತಿ ಬ್ಯಾಂಕ್ ಮುನಿಯಪ್ಪ, ಆಯುಕ್ತ ಶ್ರೀನಾಥ್ ಉಪಸ್ಥಿತರಿದ್ದರು.


































