Home ಜಿಲ್ಲೆ ಬೆಂಗಳೂರು ಗಾನ ಕೋಗಿಲೆ ಜಾನಕಿಗೆ ನಮನ

ಗಾನ ಕೋಗಿಲೆ ಜಾನಕಿಗೆ ನಮನ

ಬೆಂಗಳೂರು, ಆ. ೨೬- ಜೆ.ಪಿ. ನಗರದ ಪ್ರತಿಷ್ಠಿತ ನಳಂದ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.


ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆ ಮತ್ತು ಅಗಲಿದ ಗಾಯಕಿ ಎಸ್. ಜಾನಕಿಗೆ ಸಲ್ಲಿಸಿದ ನಮನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.


ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ವಿದ್ಯಾರ್ಥಿಗಳು ವಿವಿಧ ಭಾಷೆಗಳ ಅವರ ಮಧುರ ಹಾಡುಗಳಿಗೆ ತಕ್ಕಂತೆ ನೃತ್ಯ ಹಾಗೂ ಗಾಯನ ಪ್ರಸ್ತುತಪಡಿಸಿದರು. ಈ ಮೂಲಕ ಅಗಲಿದ ಗಾನ ಕೋಗಿಲೆಗೆ ಶಾಲೆಯ ವತಿಯಿಂದ ಅಪೂರ್ವ ಗೌರವ ನಮನ ಸಲ್ಲಿಸಲಾಯಿತು.


ವಿದ್ಯಾರ್ಥಿಗಳ ಈ ಭಾವಪೂರ್ಣ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು.


ಮಿಸ್ ಇಂಡಿಯಾ ಕಿರೀಟ ವಿಜೇತೆ ಹಾಗೂ ಪ್ರಸಿದ್ಧ ಕಿರುತೆರೆ ಮತ್ತು ಚಲನಚಿತ್ರ ಕಲಾವಿದೆ ಸ್ಮೀತಾ ಪ್ರಭು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, “ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕೇವಲ ಶಿಕ್ಷಣವೊಂದೇ ಸಾಲದು, ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆ ಉತ್ತಮ ಮುತುವರ್ಜಿ ವಹಿಸುತ್ತಿರುವುದು ಶ್ಲಾಘನೀಯ” ಎಂದರು.


ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರತಿಭಾವಂತರಿಗೆ ಮುಖ್ಯ ಅತಿಥಿ ಸ್ಮೀತಾ ಪ್ರಭು ಅವರು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು.