
ಬೆಂಗಳೂರು, ನ. ೨೧- ಮುಖ್ಯಮಂತ್ರಿಯಾದ ನಂತರ ಡಿ.ಕೆ. ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ನಗರಾಭಿವೃದ್ಧಿ ಅಧ್ಯಯನ, ಹೂಡಿಕೆ ಆಕರ್ಷಣೆಗಾಗಿ ಈ ತಿಂಗಳ ೨೩ ರಿಂದ ೨೫ರ ವರೆಗೂ ಜಪಾನ್ ಪ್ರವಾಸ ಕೈಗೊಳ್ಳುವರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಹ ಜಪಾನ್‌ಗೆ ತೆರಳಲಿದ್ದಾರೆ.
ಇದೇ ತಿಂಗಳ ೨೩ ರಂದು ಜಪಾನ್‌ನ ನಗೋಯ, ೨೪ ರಂದು ಓಸಾಕ, ೨೫ ರಂದು ಟೋಕಿಯೋದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಜ್ಯದಲ್ಲಿ ಜಪಾನ್ ಹೂಡಿಕೆಯನ್ನು ಬಲಪಡಿಸಲು ಜಪಾನ್‌ನ ಉದ್ಯಮಿಗಳೊಂದಿಗೆ ಸಭೆ ನಡೆಸುವರು.
ಜಾಗತಿಕ ಮಟ್ಟದಲ್ಲಿ ಮಾದರಿಯಾಗಿರುವ ಜಪಾನ್‌ನ ನಗರ ನಿರ್ಮಾಣ ಪದ್ದತಿಗಳನ್ನು ಅಧ್ಯಯನ ಮಾಡಲು ಮುಖ್ಯಮಂತ್ರಿಗಳು ಜಪಾನ್‌ಗೆ ತೆರಳುತ್ತಿದ್ದು, ಇವರ ಜತೆ ಹಿರಿಯ ಅಧಿಕಾರಿಗಳ ದೊಡ್ಡ ಮಟ್ಟದ ನಿಯೋಗ ಸಹ ಜಪಾನ್‌ಗೆ ತೆರಳುತ್ತಿದೆ.
ಮುಖ್ಯಮಂತ್ರಿಗಳ ಜತೆ ಜಪಾನ್‌ಗೆ ತೆರಳುತ್ತಿರುವ ನಿಯೋಗದಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತ ಹಾಗೂ ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಓ ಖುಷ್ಬು ಗೋಯಲ್ ಚೌಧರಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್, ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಯತೀಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಇರಲಿದ್ದಾರೆ.
ಮುಖ್ಯಮಂತ್ರಿಯಾದ ನಂತರ ಡಿ.ಕೆ. ಶಿವಕುಮಾರ್ ರವರಿಗೆ ಮೊದಲ ವಿದೇಶ ಪ್ರವಾಸ ಇದಾಗಿದ್ದು, ಜಪಾನ್‌ನಲ್ಲಿ ಪ್ರಮುಖ ಕಂಪೆನಿಗಳ ಉನ್ನತ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿರುವ ವಿಫುಲ ಹೂಡಿಕೆ ಅವಕಾಶಗಳನ್ನು ಮನವರಿಕೆ ಮಾಡಿಕೊಡಲಿದ್ದಾರೆ.
ರಾಜ್ಯದಲ್ಲಿ ಬರುವ ವರ್ಷ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮಕ್ಕೂ ಜಪಾನ್‌ನ ವಿವಿಧ ಕಂಪೆನಿಗಳ ಮುಖ್ಯಸ್ಥರಿಗೆ ಆಹ್ವಾನವನ್ನು ರಾಜ್ಯದ ನಿಯೋಗ ನೀಡಲಿದೆ.























