Home ಜಿಲ್ಲೆ ಬೆಂಗಳೂರು ಬಾಯಲ್ಲಿ ಚಿನ್ನದ ಕ್ಯಾಪ್ಸೂಲ್ ಇಟ್ಟುಕೊಂಡು ಬಂದ ಪ್ರಯಾಣಿಕ ಸಿಐಎಸ್‌ಎಫ್ ಬಲೆಗೆ

ಬಾಯಲ್ಲಿ ಚಿನ್ನದ ಕ್ಯಾಪ್ಸೂಲ್ ಇಟ್ಟುಕೊಂಡು ಬಂದ ಪ್ರಯಾಣಿಕ ಸಿಐಎಸ್‌ಎಫ್ ಬಲೆಗೆ

ಬೆಂಗಳೂರು, ಆ. ೨೬- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬಾಯಲ್ಲಿ ಬಂಗಾರವನ್ನು ಬಾಂಧಿಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಪ್ರಯಾಣಿಕನೊಬ್ಬ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯ ಜಾಗರೂಕತೆಯಿಂದಾಗಿ ಸಿಕ್ಕಿಬಿದ್ದಿದ್ದಾನೆ.


ಆರೋಪಿಯನ್ನು ಮೊಹಮ್ಮದ್ ಸಿರಾಜ್ ಎಂದು ಗುರುತಿಸಲಾಗಿದೆ. ಈತ ಬುಧವಾರ ಬೆಳಗಿನ ಜಾವ ದುಬೈನಿಂದ ಇಂಡಿಗೋ (೬ಇ-೧೪೮೬) ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದ. ಬಳಿಕ ಇಲ್ಲಿಂದ ಬೆಳಿಗ್ಗೆ ೯:೨೦ರ ವಿಮಾನದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ತೆರಳಲು ಸಿದ್ಧತೆ ನಡೆಸಿದ್ದ.


ಟರ್ಮಿನಲ್-೧ ರಲ್ಲಿ ಗಜಿಯಾಬಾದ್‌ಗೆ ತೆರಳುವ ಮುನ್ನ ಭದ್ರತಾ ತಪಾಸಣೆ (PESC) ನಡೆಸುವ ವೇಳೆ, ತಪಾಸಣಾ ಅಧಿಕಾರಿಯ ಪ್ರಶ್ನೆಗಳಿಗೆ ಈತ ಸರಿಯಾಗಿ ಸ್ಪಂದಿಸದೆ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ತಪಾಸಣಾ ಕೇಂದ್ರದಲ್ಲಿದ್ದ ಸಿಐಎಸ್‌ಎಫ್ ಉಪ ನಿರೀಕ್ಷಕ (ಎಸ್‌ಐ) ದೀಪಕ್ ಕುಮಾರ್ ಶರ್ಮಾ ಅವರಿಗೆ ಪ್ರಯಾಣಿಕನ ನಡವಳಿಕೆಯಲ್ಲಿ ಶಂಕೆ ವ್ಯಕ್ತವಾಗಿದೆ.


ಕೂಡಲೇ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ, ಆತ ತನ್ನ ಬಾಯಿಯೊಳಗೆ ಬಾಂಧಿಕೊಂಡಿದ್ದ ಸುಮಾರು ೮೨ ಗ್ರಾಂ ತೂಕದ ಎರಡು ಹಳದಿ ಲೋಹದ (ಚಿನ್ನ) ಕ್ಯಾಪ್ಸೂಲ್‌ಗಳನ್ನು ಹೊರಗೆ ಹಾಕಿದ್ದಾನೆ.


“ದೇಹದ ಸ್ಕ್ಯಾನರ್‌ಗೆ ಬಾಯಿಯ ಭಾಗ ಸರಿಯಾಗಿ ಸಿಗುವುದಿಲ್ಲ ಎಂಬ ಭ್ರಮೆಯಿಂದ ಆರೋಪಿ ತಪಾಸಣೆ ವೇಳೆ ಚಿನ್ನದ ಕ್ಯಾಪ್ಸೂಲ್‌ಗಳನ್ನು ಬಾಯಲ್ಲಿಟ್ಟುಕೊಂಡಿದ್ದ” ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ.


ವಶಪಡಿಸಿಕೊಂಡ ಚಿನ್ನದೊಂದಿಗೆ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕೆಐಎ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಿನ್ನದ ಮೌಲ್ಯ ಹಾಗೂ ಈ ಸಾಗಣೆಯ ಹಿನ್ನೆಲೆಯ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.


ಸಿಐಎಸ್‌ಎಫ್ ಮುಖ್ಯಸ್ಥ ಮತ್ತು ಡಿಐಜಿ ಮಂಜುನಾಥ್ ಹೆಚ್. ಅವರ ನೇತೃತ್ವದ ತಂಡ ಇತ್ತೀಚೆಗೆ ನಡೆಸಿದ ಎರಡನೇ ಯಶಸ್ವಿ ಕಾರ್ಯಾಚರಣೆ ಇದಾಗಿದೆ. ಕಳೆದ ಆಗಸ್ಟ್ ೨೦ ರಂದು ಬ್ಯಾಂಕಾಕ್‌ನಿಂದ ಬಂದಿದ್ದ ಇಬ್ಬರು ಪ್ರಯಾಣಿಕರು ತಮ್ಮ ಪ್ಯಾಂಟ್‌ನಲ್ಲಿ ೨೬೦ ಗ್ರಾಂ ಪೌಡರ್ ರೂಪದ ಚಿನ್ನವನ್ನು ಬಾಂಧಿಕೊಂಡು ಅಹಮದಾಬಾದ್‌ಗೆ ಸಾಗಿಸಲು ಯತ್ನಿಸಿದಾಗ ಸಿಐಎಸ್‌ಎಫ್ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದರು.