
ಬೆಂಗಳೂರು,ನ. ೨೧-ಚುನಾವಣೆಗೂ ಮುನ್ನ ಆಶಾ ಕಾರ್ಯಕರ್ತೆಯರಿಗೆ ?೧೫,೦೦೦ ಗೌರವಧನ ನೀಡುವುದಾಗಿ ಭರವಸೆ ಮೂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ , ಇಂದು ಅದೇ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಚಳಿ, ಅನಾರೋಗ್ಯ ಹಾಗೂ ಸಂಕಷ್ಟಗಳ ನಡುವೆ ಬೀದಿಗಿಳಿದು ಹೋರಾಡುತ್ತಿರುವಾಗ ಉತ್ತರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಪ್ರಿಯಾಂಕಾ ಗಾಂಧಿಯವರಿಂದ ಭರವಸೆ ಕೊಡಿಸಿ, ಡಿ.ಕೆ. ಶಿವಕುಮಾರ್ ಅವರ ಸರ್ಕಾರದಿಂದ ಅದೇ ಭರವಸೆಯನ್ನು ಮರೆತುಬಿಡುವುದೇ ಕಾಂಗ್ರೆಸ್ನ ಮಹಿಳಾ ಸಬಲೀಕರಣದ ಮಾದರಿ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈ ಮಹಿಳೆಯರ ನೋವು ಕಾಣಿಸುತ್ತಿಲ್ಲವೇ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಾ, ಕೆಲವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಾ, ತಮ್ಮ ಪುಟ್ಟ ಮಕ್ಕಳನ್ನೂ ಪ್ರತಿಭಟನಾ ಸ್ಥಳಕ್ಕೆ ಕರೆತರುವ ಅನಿವಾರ್ಯತೆಗೆ ಸಿಲುಕಿರುವ ಆಶಾ ಕಾರ್ಯಕರ್ತೆಯರ ಸಂಕಷ್ಟಕ್ಕೆ ಸರ್ಕಾರದ ಬಳಿ ಪರಿಹಾರವಿಲ್ಲವೇ ಎಂದು ಪ್ರಶ್ನಿಸಿದ್ದಾರೆ
ವೇದಿಕೆಗಳಲ್ಲಿ ಮಹಿಳಾ ಸಬಲೀಕರಣದ ಭಾಷಣ, ಚುನಾವಣಾ ಪ್ರಚಾರದಲ್ಲಿ ಭರವಸೆಗಳ ಮಹಾಪೂರ, ಅಧಿಕಾರಕ್ಕೆ ಬಂದ ಬಳಿಕ ನಿರ್ಲಕ್ಷ್ಯ ಮತ್ತು ಮೌನ ? ಇದೇನಾ ಕಾಂಗ್ರೆಸ್ನ ಮಹಿಳಾ ಪರ ಧೋರಣೆ ಪ್ರಿಯಾಂಕಾ ಗಾಂಧಿಯವರು ನೀಡಿದ ಭರವಸೆಗೆ ರಾಜ್ಯ ಸರ್ಕಾರ ಉತ್ತರದಾಯಿಯಾಗಬೇಕಲ್ಲವೇ ಎಂದು ಪ್ರಶ್ನಿಸಿರುವ ಅವರು
ಸರ್ಕಾರದ ಜಾಹೀರಾತುಗಳಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ, ಅಭಿವೃದ್ಧಿಯ ಹೆಸರಿನಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ, ರಾಜ್ಯದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ನ್ಯಾಯಯುತ ಗೌರವಧನ ನೀಡಲು ಮಾತ್ರ ಮನಸ್ಸಿಲ್ಲವೇ ಎಂದಿದ್ದಾರೆ
ಆಶಾ ಕಾರ್ಯಕರ್ತೆಯರ ಹೋರಾಟವನ್ನು ರಾಜಕೀಯವಾಗಿ ನೋಡದೆ, ಮಾನವೀಯತೆಯಿಂದ ನೋಡಿ. ಪ್ರಿಯಾಂಕಾ ಗಾಂಧಿಯವರ ಭರವಸೆಗೆ ಉತ್ತರ ನೀಡಿ. ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಮಾತು ಉಳಿಸಿಕೊಳ್ಳಲಿ. ಕಾಂಗ್ರೆಸ್ ಪಕ್ಷದ ಭರವಸೆಗಳ ರಾಜಕೀಯಕ್ಕೆ ಮಹಿಳೆಯರು ಬಲಿಯಾಗಬಾರದು. ಎಂದು ತಿಳಿಸಿದ್ದಾರೆ























