
ತುರುವೇಕೆರೆ, ಜು. ೪- ಜೂನ್ ೩೦ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ೨೦೨೬ ಆರಂಭವಾಗಲಿದೆ. ಒಂದು ತಿಂಗಳ ಕಾಲ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಲಿದ್ದು, ಮತದಾರರು, ನಾಗರೀಕರು ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಕುಂಇ ಅಹಮದ್ ಮನವಿ ಮಾಡಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೨೪ ಮತಗಟ್ಟೆಗಳಿದ್ದು, ೨೨೪ ಮತಗಟ್ಟೆ ಅಧಿಕಾರಿಗಳು ಹಾಗೂ ೨೩ ಮೇಲ್ವಿಚಾರಕರು ಈ ಪರಿಷ್ಕರಣೆ ಕಾರ್ಯದಲ್ಲಿ ತೊಡಗಲಿದ್ದಾರೆ. ಜೂನ್ ೨೦ರಿಂದ ೨೯ರವೆರೆಗೆ ತರಬೇತಿ, ಜೂನ್ ೩೦ ರಿಂದ ಜುಲೈ ೨೯ರವರೆಗೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ, ಆಗಸ್ಟ್ ೦೫ರಂದು ಮತದಾರರ ಕರಡುಪಟ್ಟಿ ಪ್ರಕಟ, ಆಗಸ್ಟ್ ೦೫ ರಿಂದ ಸೆಪ್ಟಂಬರ್ ೦೪ರವರೆಗೆ ಆಕ್ಷೇಪಣೆಗಳಿಗೆ ಅವಕಾಶ, ಆಗಸ್ಟ್ ೦೫ರಿಂದ ಅಕ್ಟೋಬರ್ ೦೩ರವರೆಗೆ ಆಕ್ಷೇಪಣೆಗ ವಿಚಾರಣೆ ಮತ್ತು ವಿಲೇವಾರಿ ಹಾಗೂ ಅಕ್ಟೋಬರ್ ೦೭ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಜೂನ್ ೩೦ರಿಂದ ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಮಾಹಿತಿಯ ಗಣತಿ ನಮೂನೆ ನೀಡಲಿದ್ದು, ಮತದಾರರು ಕಡ್ಡಾಯವಾಗಿ ನಮೂನೆಯನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಬೇಕಿದೆ. ನಮೂನೆಯ ದ್ವಿಪ್ರತಿಯನ್ನು ನೀಡಲಿದ್ದು ಒಂದು ಪ್ರತಿಯನ್ನು ಸ್ವೀಕೃತಿಯಾಗಿ ಮತದಾರರು ತಮ್ಮಲ್ಲೇ ಉಳಿಸಿಕೊಳ್ಳಬೇಕು. ೧೮ ವರ್ಷ ಮೇಲ್ಟಟ್ಟವರು, ಮನೆಯ ಮುಖ್ಯಸ್ಥರು ನಮೂನೆಗೆ ಸಹಿ ಮಾಡಬಹುದಾಗಿದೆ. ಬಿಎಲ್‌ಒಗಳು ಪ್ರತಿ ಮತದಾರರ ಮನೆಗೆ ಮೂರು ಬಾರಿ ಭೇಟಿ ಮಾಡಲಿದ್ದು, ಮಾಹಿತಿ ನೀಡಬಹುದಾಗಿದೆ. ಮತದಾರರು ಮೂರೂ ಬಾರಿಯೂ ಮತದಾರರು ಲಭ್ಯವಿಲ್ಲದಿದ್ದಲ್ಲಿ ಆ ಮತದಾರರನ್ನು ಗೈರು, ವರ್ಗ, ಮರಣ,ನಕಲು ಈ ವರ್ಗಕ್ಕೆ ಸೇರ್ಪಡೆ ಮಾಡಲಾಗುವುದು. ೨೦೨೬ರ ಅಕ್ಟೋಬರ್ ೦೧ಕ್ಕೆ ೧೮ ವರ್ಷ ಪೂರ್ಣಗೊಂಡ ಮತದಾರರನ್ನು ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ೧,೮೩,೫೪೭ ಮಂದಿ (೯೦೪೮೦ ಪುರುಷರು, ೯೩೦೬೭ ಮಹಿಳೆಯರು) ಮತದಾರರಿದ್ದು, ಈವರೆಗೆ ಶೇ. ೯೭ ರಷ್ಟು ಮಂದಿಯನ್ನು ಮ್ಯಾಪಿಂಗ್ ಮಾಡಲಾಗಿದೆ. ಕ್ಷೇತ್ರದಲ್ಲಿ ೭೩೧ ವಿಐಪಿ, ವಿವಿಐಪಿ ಮತದಾರರೆಂದು ಗುರುತಿಸಲಾಗಿದೆ. ೨೯೬೦ ಮಂದಿ ವಿಶೇಷಚೇತನ ಮತದಾರರು, ೨೨೩೪ ಹಿರಿಯ ನಾಗರೀಕ ಮತದಾರರು, ೪೨೪೯ ಯುವ ಮತದಾರರಿದ್ದಾರೆ. ಮೃತಪಟ್ಟವರ ಹೆಸರು ಕೈಬಿಡುವ, ೧೮ ವರ್ಷ ಮೇಲ್ಪಟ್ಟವರ ಸೇರ್ಪಡೆಗೊಳಿಸುವ, ಸ್ಥಳಾಂತರಗೊಂಡ ಮತದಾರರ ಪರಿಷ್ಕರಣೆ ಆಗಲಿದೆ. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಮನೆಮನೆಗೆ ಭೇಟಿ ನೀಡುವ ಅಧಿಕಾರಿಗಳಿಗೆ ಚುನಾವಣಾ ಆಯೋಗ ನಿರ್ದಿಷ್ಟಪಡಿಸಿರುವ ೧೨ ದಾಖಲೆಗಳಲ್ಲಿ ಒಂದನ್ನು ಘೋಷಣಾ ನಮೂನೆಯೊಂದಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದರು.


































