Home ಜಿಲ್ಲೆ ಬೆಂಗಳೂರು ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ ಹೆಚ್ಚಳ

ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ ಹೆಚ್ಚಳ

ನವದೆಹಲಿ, ನ.೧೬: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ವಾಯುಮಾಲಿನ್ಯ ಮತ್ತೆ ಹೆಚ್ಚಾಗಿದ್ದು, ಗಾಳಿಯ ಗುಣಮಟ್ಟ ’ಕಳಪೆ’ ವಿಭಾಗಕ್ಕೆ ತಲುಪಿದೆ. ನವೆಂಬರ್ ೧೬ರ ಬೆಳಗ್ಗೆ ೬ ಗಂಟೆಯ ವೇಳೆಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ ೨೧೩ಕ್ಕೆ ದಾಖಲಾಗಿದೆ.


ಭಾನುವಾರ ದೆಹಲಿಯ ವಾಯು ಗುಣಮಟ್ಟದಲ್ಲಿ ತಾತ್ಕಾಲಿಕ ಸುಧಾರಣೆ ಕಂಡುಬಂದಿತ್ತು. ಅಂದು ಎಕ್ಯೂಐ ಸುಮಾರು ೯೦ಕ್ಕೆ ಇಳಿಕೆಯಾಗುವ ಮೂಲಕ ಜನರಿಗೆ ಕೊಂಚ ನೆಮ್ಮದಿ ನೀಡಿತ್ತು. ಆದರೆ, ಒಂದೇ ದಿನದ ಅಂತರದಲ್ಲಿ ಮಾಲಿನ್ಯದ ಪ್ರಮಾಣ ಮತ್ತೆ ಏರಿಕೆಯಾಗಿದೆ.


ನವೆಂಬರ್ ೧೧ರಿಂದ ದೆಹಲಿಯ ಗಾಳಿಯ ಗುಣಮಟ್ಟ ಬಹುತೇಕ ’ಅತ್ಯಂತ ಕಳಪೆ’ ವಿಭಾಗದಲ್ಲೇ ಮುಂದುವರಿದಿತ್ತು. ಈ ಅವಧಿಯಲ್ಲಿ ಹಲವು ಗಂಟೆಗಳ ಎಕ್ಯೂಐ ಪ್ರಮಾಣ ’ತೀವ್ರ ಕಳಪೆ’ ಮಟ್ಟದ ಸಮೀಪ ತಲುಪಿದ್ದರೆ, ಒಂದು ಬಾರಿ ಆ ಮಿತಿಯನ್ನೂ ದಾಟಿತ್ತು.


ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪಿಎಂ೨.೫ ಮತ್ತು ಪಿಎಂ೧೦ ಸೇರಿದಂತೆ ವಾಯುವಿನಲ್ಲಿರುವ ಸೂಕ್ಷ್ಮ ಧೂಳಿನ ಕಣಗಳ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿತ್ತು. ಇದರಿಂದಾಗಿ ಭಾನುವಾರ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ, ಇದೀಗ ನಗರದ ಹಲವು ಪ್ರದೇಶಗಳಲ್ಲಿ ಮತ್ತೆ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ.


ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣಗಳೇನು?
ದೆಹಲಿಯ ವಾಯುಮಾಲಿನ್ಯಕ್ಕೆ ಜೈವಿಕ ಇಂಧನಗಳ ದಹನ ಪ್ರಮುಖ ಕಾರಣವಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದರಲ್ಲಿ ಕೃಷಿ ತ್ಯಾಜ್ಯ ಸುಡುವುದು ಹಾಗೂ ಮನೆಗಳಲ್ಲಿ ಅಡುಗೆ ಮತ್ತು ಇತರ ಉದ್ದೇಶಗಳಿಗಾಗಿ ಮರ, ಸಗಣಿ ಬೆರಣಿಗಳಂತಹ ಘನ ಇಂಧನಗಳನ್ನು ಬಳಸುವುದು ಸೇರಿದೆ. ಇವು ದೆಹಲಿಯ ಒಟ್ಟು ಮಾಲಿನ್ಯದಲ್ಲಿ ಶೇ.೨೫.೫ರಷ್ಟು ಪಾಲು ಹೊಂದಿವೆ.


ವಾಯು ಗುಣಮಟ್ಟದ ಮುನ್ನೆಚ್ಚರಿಕೆ ವ್ಯವಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ದ್ವಿತೀಯ ಸಾವಯವ ಏರೋಸಾಲ್‌ಗಳು ಶೇ.೨೩.೬ರಷ್ಟು ಪಾಲು ಹೊಂದಿದ್ದು, ಮಾಲಿನ್ಯಕ್ಕೆ ಎರಡನೇ ಅತಿದೊಡ್ಡ ಕಾರಣವಾಗಿವೆ.ವಾಹನಗಳಿಂದ ಹೊರಬರುವ ಹೊಗೆಯೂ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.ಇನ್ನುಳಿದಂತೆ ವಿವಿಧ ಮೂಲಗಳಿಂದ ಉಂಟಾಗುತ್ತಿರುವ ಮಾಲಿನ್ಯದ ಪ್ರಮಾಣ ಹೀಗಿದೆ:


ಜೈವಿಕ ಇಂಧನಗಳ ದಹನ: ಶೇ.೨೫.೫ದ್ವಿತೀಯ ಸಾವಯವ ಏರೋಸಾಲ್‌ಗಳು: ಶೇ.೨೩.೬ಮಿಶ್ರ ದಹನ: ಶೇ.೧೨.೬ದ್ವಿತೀಯ ಅಜೈವಿಕ ಏರೋಸಾಲ್‌ಗಳು: ಶೇ.೧೦.೭
ನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್, ರಬ್ಬರ್ ಹಾಗೂ ಪುರಸಭೆಯ ಕಸವನ್ನು ಸುಡುವುದರಿಂದಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ದೆಹಲಿಯ ವಾಯು ಗುಣಮಟ್ಟದ ಮೇಲೆ ವಾಹನಗಳ ಹೊಗೆ, ಕೃಷಿ ತ್ಯಾಜ್ಯ ದಹನ, ಘನ ಇಂಧನಗಳ ಬಳಕೆ ಮತ್ತು ತ್ಯಾಜ್ಯ ಸುಡುವಿಕೆಯಂತಹ ಹಲವು ಅಂಶಗಳು ಪರಿಣಾಮ ಬೀರುತ್ತಿವೆ.