Home ಜಿಲ್ಲೆ ಮೈಸೂರು 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು, ಆ.26:-
ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯ ಭರವಸೆಯಂತೆ ಗೌರವ ಧನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ವರ್ಷಪೂರ್ತಿ ವಿವಿಧ ರೀತಿಯ ಸಮೀಕ್ಷೆಗಳಿಗೆ ನಿಯೋಜಿಸುವುದರಿಂದ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆಗೆ ಅಡಚಣೆಯಾಗುತ್ತಿದ್ದು, ಮಕ್ಕಳ ಶಾಲಾಪೂರ್ವ ಶಿಕ್ಷಣ, ಗರ್ಭಿಣಿ, ಬಾಣಂತಿಯರ ಸೌಲಭ್ಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಕಿಡಿ ಕಾರಿದರು.


ಬೇಡಿಕೆಗಳು: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15,000 ಹಾಗೂ ಸಹಾಯಕಿಯರಿಗೆ 10,000 ಗೌರವ ಧನವನ್ನು ತಕ್ಷಣವೇ ಹೆಚ್ಚಿಸಿ ಆದೇಶಿಸಬೇಕು. 2011ರಿಂದ ನಿವೃತ್ತರಾದ, ಸ್ವಯಂ ನಿವೃತ್ತಿ ಪಡೆದಿರುವ ಎಲ್ಲಾ ವಯೋವೃದ್ಧ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕಾಯಿದೆಯನ್ವಯ ಗ್ರಾಚ್ಯುಯಿಟಿ ಸೌಲಭ್ಯ ಒದಗಿಸಬೇಕು. ಅಂಗನವಾಡಿ ನೌಕರರ ಮೇಲೆ ಬಲವಂತವಾಗಿ ಬಿಎಲ್‍ಓ ಜವಾಬ್ದಾರಿ ಹೇರುವುದನ್ನು ತಕ್ಷಣ ನಿಲ್ಲಿಸಬೇಕು. ಸಮೀಕ್ಷೆ ಮಾಡುವವರಿಗೆ ಗೌರವ ಧನ ಹೆಚ್ಚಿಸಬೇಕು. ಸಮೀಕ್ಷೆ ವೇಳೆ ಅನಾರೋಗ್ಯಕ್ಕೀಡಾದರೆ ವೈದ್ಯಕೀಯ ವೆಚ್ಚ ಹಾಗೂ ಮೃತರಾದರೆ 30 ಲಕ್ಷ ಪರಿಹಾರ ಒದಗಿಸಬೇಕು. ಜಾತಿ ಪ್ರಮಾಣ ಪತ್ರ ವಿತರಣೆ ಮತ್ತು ಗೃಹಲಕ್ಷ್ಮಿ ಸರ್ವೆಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಹೊರಗಿಡಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಖಾಸಗಿ ಸಂಘ-ಸಂಸ್ಥೆಗಳು ಭೇಟಿ ನೀಡಿ ಲೈವ್ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ವೀಡಿಯೊ ಬಿತ್ತರಿಸುವುದರಿಂದ ನೌಕರರು ಮಾನಸಿಕ ಮುಜುಗರ ಎದುರಿಸುತ್ತಿದ್ದಾರೆ. ಇದನ್ನು ಇಲಾಖೆ ತಕ್ಷಣ ನಿಷೇಧಿಸಬೇಕು. ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ-ಯುಕೆಜಿ ಆರಂಭಿಸಿರುವುದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ.


ಇದನ್ನು ತಡೆಯಲು ಅಂಗನವಾಡಿ ಕೇಂದ್ರಗಳಲ್ಲೇ ತರಗತಿಗಳನ್ನು ಪ್ರಾರಂಭಿಸಬೇಕು. ಮಕ್ಕಳ ಆಹಾರಕ್ಕೆ ನೀಡುತ್ತಿರುವ ತರಕಾರಿ ವೆಚ್ಚ, ಡಿಎ ಹಾಗೂ ಪ್ರಭಾರ ಭತ್ಯೆಯನ್ನು ಪ್ರಸ್ತುತ ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸಬೇಕು.
ನೌಕರರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಸಂಪೂರ್ಣ ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು. ಪೆÇೀಷಣ್ ಅಭಿಯಾನ ಮತ್ತು ಎಫ್‍ಆರ್‍ಎಸ್ ವ್ಯವಸ್ಥೆಯಿಂದಾಗಿ ಇಬ್ಬಂದಿ ಕೆಲಸ ಮಾಡುವುದು ಕಷ್ಟಕರವಾಗಿದ್ದು, ಖಾಲಿ ಇರುವ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ಅನುಕಂಪದ ನೇಮಕಾತಿ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಸರೋಜಮ್ಮ.ಪಿ.ಎಂ, ಕಾರ್ಯದರ್ಶಿ ವೈ.ಮಹದೇವಮ್ಮ, ಖಜಾಂಚಿ ಸಿ.ಗಿರಿಜಾ, ಗೌರವಾಧ್ಯಕ್ಷ ಡಿ.ಜಗನ್ನಾಥ್, ಉಪಾಧ್ಯಕ್ಷರಾದ ಜಯಮ್ಮ, ನಜರತ್ ಉನ್ನೀಸಾ, ವನಜಾಕ್ಷಿ, ಮುಖಂಡರಾದ ಸುಮ, ಭಾಗ್ಯ, ಗೀತಾ ಸೇರಿದಂತೆ ಹಲವರು ಭಾಗವಹಿಸಿದ್ದರು.