Home ಜಿಲ್ಲೆ ಮೈಸೂರು 282 ಅನಧಿಕೃತ ವಾಹನಹಗಳಿಗೆ ನೋಟಿಸ್

282 ಅನಧಿಕೃತ ವಾಹನಹಗಳಿಗೆ ನೋಟಿಸ್

ಸಂಜೆವಾಣಿ ನ್ಯೂಸ್
ಮೈಸೂರು, ಆ.26:-
ನಗರದ ಸಾರ್ವಜನಿಕ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲದಿಂದ ಅನಧಿಕೃತವಾಗಿ ನಿಲುಗಡೆ ಮಾಡಲಾಗಿರುವ ಹಾಗೂ ಬಳಕೆಯಲ್ಲಿಲ್ಲದ 382 ಪರಿತ್ಯಕ್ತ ವಾಹನಗಳಿಗೆ ಮಹಾನಗರ ಪಾಲಿಕೆ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.


ವಾಹನಗಳಿಗೆ ನೋಟಿಸ್ ಅಂಟಿಸುವ ವಿಶೇಷ ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ಆಯುಕ್ತ ಸವಿತಾ.ಎಂ.ಕೆ ಚಾಲನೆ ನೀಡಿದರು. ನಗರದಲ್ಲಿ ದೀರ್ಘಕಾಲದಿಂದ ನಿಂತಿರುವ ಈ ವಾಹನಗಳಿಂದ ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಜತೆಗೆ, ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದ್ದು, ವಾಹನಗಳ ಸುತ್ತಲೂ ತ್ಯಾಜ್ಯ ಸಂಗ್ರಹವಾಗಿ ಸೊಳ್ಳೆಗಳು ಮತ್ತು ಕ್ರಿಮಿಕೀಟಗಳು ಉತ್ಪತ್ತಿಯಾಗುವ ಮೂಲಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪಾಲಿಕೆ ತಿಳಿಸಿದೆ.
7 ದಿನಗಳಲ್ಲಿ ತೆರವುಗೊಳಿಸದಿದ್ದರೆ ಹರಾಜು: ನೋಟಿಸ್ ಅಂಟಿಸಿದ ದಿನಾಂಕದಿಂದ 7 ದಿನಗಳ ಒಳಗಾಗಿ ವಾಹನ ಮಾಲೀಕರು ತಮ್ಮ ವಾಹನಗಳನ್ನು ಜಾಗದಿಂದ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976ರ ಕಲಂ 127 ಹಾಗೂ ಪಾಲಿಕೆಯ ಉಪವಿಧಿಗಳ ಅನ್ವಯ, ಈ ವಾಹನಗಳನ್ನು ಪರಿತ್ಯಕ್ತ, ಅನುಪಯುಕ್ತ ಎಂದು ಪರಿಗಣಿಸಿ ಟೋಯಿಂಗ್ ಮೂಲಕ ಜಪ್ತಿ ಮಾಡಲಾಗುವುದು.


ವಾಹನ ತೆರವು ಹಾಗೂ ಸಾಗಾಣಿಕೆಯ ಸಂಪೂರ್ಣ ವೆಚ್ಚವನ್ನು ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಮತ್ತು ನಿಯಮಗಳ ಪ್ರಕಾರ ವಾಹನಗಳನ್ನು ಹರಾಜು ಅಥವಾ ಸ್ಕ್ರ್ಯಾಪ್ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ನಗರವನ್ನು ಅಡೆತಡೆಮುಕ್ತ ಹಾಗೂ ಸ್ವಚ್ಛವಾಗಿಡಲು ವಾಹನ ಮಾಲೀಕರು ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.
ಕಾರ್ಯಾಚರಣೆ ವೇಳೆ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ಪರಿಸರ), ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.