
ಸಂಜೆವಾಣಿ ನ್ಯೂಸ್
ಮೈಸೂರು, ಆ.26:- ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್)ಯಲ್ಲಿ ದೇಶದಲ್ಲೇ ಅತ್ಯಧಿಕ ಮತದಾರರನ್ನು ಕರ್ನಾಟಕದಲ್ಲಿ ಡಿಲೀಟ್ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಶೇ.13 ಮತದಾರರು ಡಿಲೀಟ್ ಅತ್ಯಧಿಕ ಎನ್ನಲಾಗಿತ್ತು. ಕರ್ನಾಟಕದಲ್ಲಿ ಶೇ.20 ಮತದಾರರನ್ನು ತೆಗೆಯಲಾಗಿದೆ. ಆ ಸಂಖ್ಯೆ ಹೆಚ್ಚಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಬಿಜೆಪಿ ಸೂಚನೆಯಂತೆ ವ್ಯವಸ್ಥಿತವಾಗಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟು ವಂಚಿಸುತ್ತಿದೆ. ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಅನ್ಬುಕುಮಾರ್ ನಮ್ಮ ಯಾವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಅವರಿಗೆ ಸ್ಪಷ್ಟತೆ ಇಲ್ಲ ಮತ್ತು ಸುಳ್ಳು ಹೇಳುತ್ತಿದ್ದಾರೆ. ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಗೆ ಪಟ್ಟಿ ಪರಿಷ್ಕರಣೆಯ ಜವಾಬ್ದಾರಿ ವಹಿಸಿದ್ದು, ಆರ್‍ಎಸ್‍ಎಸ್ ಸೂಚನೆ ಮೇರೆಗೆ ಕಾಂಗ್ರೆಸ್ ಮತದಾರರನ್ನು ಹುಡುಕಿ ಹುಡುಕಿ ತೆಗೆಯಲಾಗುತ್ತಿದೆ ಎಂದು ಆರೋಪಿಸಿದರು.
1.8 ಕೋಟಿ ಮತದಾರರು ಎಸ್‍ಡಿಡಿಒ ಪಟ್ಟಿಗೆ ಸೇರಿಸಲಾಗಿದೆ. 44.64 ಲಕ್ಷಮತದಾರರಿಗೆ ಲಾಜಿಕಲ್ ಎರರ್‍ಗೆ ಸೇರಿಸಲಾಗಿದ್ದು, ನೋಟಿಸ್ ಕೊಡಲಾಗುತ್ತಿದೆ. 28 ಲಕ್ಷ ಮತದಾರರನ್ನು ಅನ್‍ಮ್ಯಾಪ್ ಮಾಡಲಾಗಿದೆ. ವರ್ಗಾವಣೆಯಲ್ಲಿ 65 ಲಕ್ಷ, ನಕಲು 7 ಲಕ್ಷ, 2001ರಿಂದ 2025ರವರೆಗೆ ರಾಜ್ಯದಲ್ಲಿ 98 ಲಕ್ಷಮತದಾರರು ಮೃತಪಟ್ಟಿದ್ದಾರೆ. ಆದರೆ, ಎಸ್‍ಐಆರ್‍ನಲ್ಲಿ 16.4 ಲಕ್ಷ ನಿಧನರಾಗಿದ್ದಾರೆ ಎಂದು ತೋರಿಸಲಾಗಿದೆ ಎಂದು ವಿವರಿಸಿದರು.
ಬದುಕಿರುವವರನ್ನು ಸಾಯಿಸಿದ್ದಾರೆ. ಒಂದೇ ವ್ಯಕ್ತಿಗೆ ಎರಡು ಕಡೆ ಹೆಸರಿದೆ. 5.5 ಕೋಟಿ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸುಮಾರು 25 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆಯುವ ಸಾಧ್ಯತೆಗಳಿವೆ ಎಂದು ಹೇಳಿದರು.
ನರಸಿಂಹರಾಜ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತದಾರರನ್ನು ಎಸ್‍ಡಿಡಿಓ ಪಟ್ಟಿಗೆ ಸೇರಿಸಲಾಗಿದೆ. ಮೈಸೂರು ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 4 ಲಕ್ಷ ಮತದಾರರನ್ನು ತೆಗೆಯಲಾಗಿದೆ. ಕರಡು ಪಟ್ಟಿ ಪ್ರಕಟವಾದ ಒಂದೇ ದಿನಕ್ಕೆ 8 ಸಾವಿರ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕರ್ನಾಟಕದಲ್ಲಿ ನಡೆದಿರುವ ಪರಿಷ್ಕರಣೆಯಲ್ಲಿ ಹಲವು ಲೋಪಗಳಿದ್ದು, ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ಇದನ್ನು ಪ್ರಶ್ನೆ ಮಾಡಬೇಕು ಎಂದು ಒತ್ತಾಯಿಸಿದರು.
ಆ.25ರಿಂದ 9 ಸಾವಿರ ಕ್ಯುಸೆಕ್ ನೀರು ಬಿಡಬೇಕೆಂಬ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎಂ.ಲಕ್ಷ್ಮಣ್ ಅವರು, 75 ಟಿಎಂಸಿ ನೀರು ಸಂಗ್ರಹವಿದ್ದು, ಮುಂದಿನ ಏಪ್ರಿಲ್ ತನಕ 55 ಟಿಎಂಸಿ ಕುಡಿಯಲು ನೀರು ಬೇಕು. ನೀರಿಲ್ಲದಿದ್ದರೂ ಬಿಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಿಗಳ ಮುಂದೆ ವಕೀಲರು ರಾಜ್ಯದ ವಸ್ತುಸ್ಥಿತಿ ವಿವರಿಸುತ್ತಿಲ್ಲವೇ? ಆಕ್ಸಫರ್ಡ್ ವಿವಿಯಲ್ಲಿ ಓದಿರುವ ರಾಹುಲ್ ಗಾಂಧಿಯವರನ್ನು ನಾಲಾಯಕ್ ಎನ್ನುವ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ವಿ.ಸೋಮಣ್ಣ ಅವರು ರಾಜ್ಯದ ಪರವಾಗಿ ಮಾತನಾಡಿ, ರಾಜ್ಯದ ಪರಿಸ್ಥಿತಿ ಅಧ್ಯಯನಕ್ಕೆ ತಂಡ ಕಳುಹಿಸುವಂತೆ ಒತ್ತಡ ಹೇರುವಂತೆ ಒತ್ತಾಯಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಧ್ಯಮ ವಕ್ತಾರ ಕೆ. ಮಹೇಶ್, ಮುಖಂಡರಾದ ಗಿರೀಶ್, ಗೋಪಿನಾಥ್, ಚಂದ್ರು, ಮಹದೇವಸ್ವಾಮಿ, ವಿನೋದ್ ಇದ್ದರು.


































