
ಮಾಲೂರು.ಜು.೩೧ : ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ಗೊಳಿಸಲು ರಾಹುಲ್ ಗಾಂಧಿ ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷರನ್ನು ಹೊಸ ಪ್ರಯೋಗದೊಂದಿಗೆ ಆಯ್ಕೆ ಮಾಡಲಾಗುತ್ತಿದ್ದು,ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಿ ಐಸಿಸಿ ವರಿಷ್ಠರಿಗೆ ಮಾಹಿತಿ ಒದಗಿಸಲಾಗುವುದು ಎಂದು ಎಐಸಿಸಿ ವೀಕ್ಷಕ ರಾಮಕಿಶನ್ ಒಜಾ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹಣೆ ಮಾಡಲು ಮಾಲೂರು, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಆಯೋಜಿಸಲಾಗಿದ್ದ ಸಭೆಗೆ ಆಗಮಿಸಿದ್ದ ಒಜಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ವೇಳೆ ನಾಲ್ಕೈದು ಮುಖಂಡರು ಚರ್ಚಿಸಿ ತೀರ್ಮಾನ ಮಾಡುತ್ತಿದ್ದರು, ಆದರೆ ರಾಹುಲ್ ಗಾಂಧಿ ವಿನೂತನ ಪ್ರಯೋಗ ಮಾಡುತ್ತಿದ್ದು,ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರನ್ನು ಕಳುಹಿಸಿದ್ದಾರೆ.ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗುವವರು ಚತುರರಾಗಿರಬೇಕು,ಸಂಘಟನಾ ಶಕ್ತಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು,ಪಕ್ಷವನ್ನು ಗಟ್ಟಿಗೊಳಿಸಲು ಮುಂದಾಗುವಂತಹವರನ್ನು ಆಯ್ಕೆ ಮಾಡಲು ಕಾರ್ಯಕರ್ತರೇ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಹೊಸ ಪ್ರಯೋಗವನ್ನು ಆರಂಭಿಸಿದ್ದಾರೆ.ಕಾರ್ಯಕರ್ತರಿಂದ ಸಂಗ್ರಹಿಸಿದ ಅಭಿಪ್ರಾಯಗಳ ಮಾಹಿತಿಯನ್ನು ಎಐಸಿಸಿ ವರಿಷ್ಠರಿಗೆ ಪಕ್ಷದ ವರಿಷ್ಠರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸುತ್ತಾರೆ.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ.ಜಿಲ್ಲಾಧ್ಯಕ್ಷರ ವಿನೂತನ ರೀತಿಯಲ್ಲಿ ಆಯ್ಕೆ ಮಾಡಲು ರಾಹುಲ್ ಗಾಂಧಿಯವರು ಕಳುಹಿಸಿರುವ ವೀಕ್ಷಕರು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ಜಿಲ್ಲಾ ವರಿಷ್ಠರಿಗೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ನಾಗರಾಜ್, ಕೆಪಿಸಿಸಿ ವೀಕ್ಷಕರದ ಮಾಜಿ ಶಾಸಕ ಸಂಪಂಗಿ, ವೆಂಕಟೇಶ, ಮಣಿಂದರ್ ಸಿಂಗ್, ಯೋಗೇಶ್ವರಿ ವಿಜಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಲಕ್ಷ್ಮಿ ನಾರಾಯಣ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಹೇಮಮಾಲಿನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಕೃಷ್ಣಪ್ಪ, ಎಸ್ ಜೆ ರಾಮಮೂರ್ತಿ, ನಾರಾಯಣಸ್ವಾಮಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಜಯನರಸಿಂಹ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.


































