
ಮಂಡ್ಯ: ನ.23:- ಮಂಡ್ಯ ಜಿಲ್ಲೆಯ ಜನರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜಕೀಯ ಶಕ್ತಿ ತುಂಬಿದ್ದ ಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು 3.5 ಲಕ್ಷ ಮತಗಳ ಅಂತರ ದಿಂದ ಗೆಲ್ಲಿಸಿ ಕಳುಹಿಸಿದ್ದಾರೆ. ಮಂಡ್ಯ ಜಿಲ್ಲೆಯ ಋಣವನ್ನು ನಮ್ಮ ಕುಟುಂಬ ಎಂದಿಗೂ ಮರೆಯುವುದಿಲ್ಲ. 2028ಕ್ಕೆ ರಾಜ್ಯದಲ್ಲಿ ಮೋದಿ, ದೇವೇಗೌಡರು ಹಾಗೂ ಕುಮಾರಣ್ಣ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಕೊತ್ತತ್ತಿ ಹೋಬಳಿ ಎಲೆಚಾಕನಹಳ್ಳಿ ಯಲ್ಲಿ ಆಯೋಜಿಸಿದ್ದ ಶ್ರೀ ಏಳೂರಮ್ಮ ದೇವಸ್ಥಾನದ ಶಂಕುಸ್ಥಾಪನೆ ಕಾರ್ಯಕ್ರಮ ದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ದೇವಸ್ಥಾನ ನಿರ್ಮಾಣಕ್ಕೆ ತಮ್ಮ ವತಿಯಿಂದ 10 ಲಕ್ಷ ಆರ್ಥಿಕ ನೆರವು ಘೋಷಿಸಿದರು.
ಸ್ವಾಮೀಜಿಗಳ ಹೇಳಿಕೆಗೆ ಬೇಸರ, ಸಾಲಮನ್ನಾ ಸ್ಮರಣೆ: ಇತ್ತೀಚೆಗೆ ಕೆಲವು ಸ್ವಾಮೀಜಿಗಳು ಕುಮಾರ ಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರು ವುದು ತೀವ್ರ ನೋವು ತಂದಿದೆ. ದೇವೇಗೌಡರು ತಮ್ಮ ಸ್ವಂತ ಆಸ್ತಿ ಹಾಗೂ ಕೋಟ್ಯಂತರ ರೂಪಾಯಿ ಹಣವನ್ನು ತ್ಯಾಗ ಮಾಡಿ ಮಠ-ಮಾನ್ಯಗಳನ್ನು ಕಟ್ಟಿಕೊಟ್ಟಿದ್ದಾರೆ.ಜನರಿಗೆ ಅನ್ಯಾಯವಾದಾಗ ಧ್ವನಿ ಎತ್ತುವುದು ಕುಮಾರಣ್ಣನ ಗುಣ. ಅದನ್ನೇ ತಪ್ಪಾಗಿ ಬಿಂಬಿಸಬಾರದು. 94 ವರ್ಷ ವಯಸ್ಸಿನಲ್ಲೂ ದೇವೇ ಗೌಡರು ಬಡವರ ಏಳಿಗೆಯ ಬಗ್ಗೆಯೇ ಚಿಂತನೆ ಮಾಡುತ್ತಿ ದ್ದಾರೆ ಎಂದರು.
ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗ 14 ತಿಂಗಳಲ್ಲೇ 25 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದರು. ಮೈಸೂರು-ಬೆಂಗಳೂರು ಹೆದ್ದಾರಿ ವಿಸ್ತರಣೆ ವೇಳೆ ಮನೆ ಅರ್ಧ ಅಡಿ ಹೋದರೂ ಪೂರ್ಣ ಪರಿಹಾರ ನೀಡುವಂತೆ ಆದೇಶಿಸಿ, ಪಕ್ಷಭೇದವಿಲ್ಲದೆ ಕಾಂಗ್ರೆಸ್ ಮುಖಂಡರಿಗೂ 80 ಲಕ್ಷ ಪರಿಹಾರ ಕೊಡಿಸಿದ್ದೆ. ನಾವು 18 ತಿಂಗಳಲ್ಲಿ ಶೇ.95ರಷ್ಟು ಭೂಸ್ವಾಧೀನ ಪೂರ್ಣಗೊಳಿ ಸಿದ್ದರಿಂದ ಹೆದ್ದಾರಿ ನಿರ್ಮಾಣ ಸಾಧ್ಯವಾಯಿತು. ಆದರೆ ಈಗ ಕೆಲವರು ಜೋಡೆತ್ತುಗಳಂತೆ ಹೆದ್ದಾರಿಯ ಕ್ರೆಡಿಟ್ ಪಡೆಯಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದರು.
ಹೈನುಗಾರರ ರಕ್ತ ಹೀರುತ್ತಿರುವ ಸರ್ಕಾರ: ನಾನು ಇಂಧನ ಸಚಿವ ನಾಗಿದ್ದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಪೈಸೆ ವಿದ್ಯುತ್ ದರ ಏರಿಕೆ ಮಾಡಿರಲಿಲ್ಲ. 12 ವರ್ಷ ಕೆಎಂಎಫ್ ಅಧ್ಯಕ್ಷನಾಗಿದ್ದಾಗ 120ಕ್ಕೆ ಒಂದು ಬ್ಯಾಗ್ ಪಶುಆಹಾರ ನೀಡುತ್ತಿದ್ದೆ. ಆದರೆ ಈಗಿನ ಸರ್ಕಾರ ಹಾಲಿನ ದರ ?7 ಹೆಚ್ಚಿಸಿ, ಮತ್ತೆ ?3 ಕಡಿತ ಮಾಡಿದೆ. ಪಶುಆಹಾರದ ಬೆಲೆ ಟನ್ಗೆ 28 ಸಾವಿರಕ್ಕೆ ಏರಿಕೆ ಯಾಗಿದ್ದು, ಹೈನುಗಾರರ ರಕ್ತ ಹೀರುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಏಳೂರಮ್ಮ ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಪಕ್ಷಗಳ ವರು ನೀಡುವ ದೇಣಿಗೆ ಸ್ವೀಕರಿಸಿ.ಊರಿನ ಬಡವರು ಹಾಗೂ ವೃದ್ಧರಿಗೆ ತೊಂದರೆ ನೀಡದೆ, ಯಥಾಶಕ್ತಿ ನೆರವು ಪಡೆದು ಒಗ್ಗಟ್ಟಿನಿಂದ 5-6 ತಿಂಗಳಲ್ಲಿ ಭವ್ಯ ದೇವಸ್ಥಾನ ಹಾಗೂ ಸುತ್ತಲೂ ಉದ್ಯಾನ ವನ ನಿರ್ಮಿಸುವಂತೆ ಸಲಹೆ ನೀಡಿದರು.
























