Home ಜಿಲ್ಲೆ ಆರ್.ಡಿ.ಎ.ಅಧ್ಯಕ್ಷರಾಗಿ ರುದ್ರಪ್ಪ ಅಂಗಡಿ ಅಧಿಕಾರ ಸ್ವೀಕಾರ

ಆರ್.ಡಿ.ಎ.ಅಧ್ಯಕ್ಷರಾಗಿ ರುದ್ರಪ್ಪ ಅಂಗಡಿ ಅಧಿಕಾರ ಸ್ವೀಕಾರ

ರಾಯಚೂರು:ನ.೨೩- ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ (ಆರ್‌ಡಿಎ) ನೂತನ ಅಧ್ಯಕ್ಷರಾಗಿ ರುದ್ರಪ್ಪ ಅಂಗಡಿ ಅಧಿಕಾರ ಸ್ವೀಕರಿಸಿದರು.
ಕಾಂಗ್ರೆಸ್ ಮುಖಂಡ ರವಿ ಬೋಸರಾಜು,ನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಹ್ಮದ್ ಶಾಲಂ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರುದ್ರಪ್ಪ ಅಂಗಡಿ, ’ಇಂದಿನ ದಿನ ನನ್ನ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಐತಿಹಾಸಿಕ ದಿನವಾಗಿದೆ. ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ನನ್ನ ಮೇಲೆ ವಿಶ್ವಾಸವಿಟ್ಟು ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ. ಈ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ರಾಯಚೂರು ನಗರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮುಂದಿನ ಕಾರ್ಯಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದಿನ ಆಡಳಿತ ಮಂಡಳಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಲಾಗುವುದು. ಈಗಾಗಲೇ ಅನುಷ್ಠಾನ ಹಂತದಲ್ಲಿರುವ ಕಾಮಗಾರಿಗಳಿಗೆ ವೇಗ ನೀಡುವುದರ ಜತೆಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ನ್ಯೂನತೆಗಳಿದ್ದರೆ ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಯಚೂರು ನಗರದ ಬಹುನಿರೀಕ್ಷಿತ ರಿಂಗ್‌ರೋಡ್ ಯೋಜನೆಯ ಅನುಮೋದನೆಗಾಗಿ ಈಗಾಗಲೇ ಪಕ್ಷದ ಹಿರಿಯ ಮುಖಂಡರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ರವಿ ಬೋಸರಾಜು, ಶಾಲಂ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿವಾಸರೆಡ್ಡಿ, ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಯೋಜನೆಯ ಕುರಿತು ಚರ್ಚಿಸಿದ್ದಾರೆ. ರಿಂಗ್‌ರೋಡ್ ಯೋಜನೆಗೆ ಶೀಘ್ರ ಅನುಮೋದನೆ ದೊರೆಯುವ ನಿರೀಕ್ಷೆಯಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ಪ್ರಾಧಿಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ನಗರದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್, ಎನ್.ಎಸ್. ಬೋಸರಾಜು, ರವಿ ಬೋಸರಾಜು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗುವುದು. ಪ್ರಾಧಿಕಾರದ ಕಾರ್ಯಚಟುವಟಿಕೆಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಹಿರಿಯ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ರುದ್ರಪ್ಪ ಅಂಗಡಿ ಅವರ ಅಭಿಮಾನಿಗಳು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.