
ಉಡುಪಿ,ಮೇ.೩೧; ಸರಕು ಸಾಗಟ ಲಾರಿಗೆ ಗೂಡ್ಸ್ ಟೆಂಪೋ ಹಿಂದುಗಡೆ ಗುದ್ದಿದ ಪರಿಣಾಮವಾಗಿ, ಟೆಂಪೋ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಸ್ಪಷ್ಟತೆ ತಿಳಿದುಬಂದಿಲ್ಲ. ನಿಂತಿದ್ದ ಲಾರಿಗೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದಿರಬಹುದೆಂದು ಶಂಕಿಸಲಾಗಿದೆ. ಮೃತ ಚಾಲಕ ಶಿವಮೊಗ್ಗದ ಪ್ರಶಾಂತ್ ಪಿ (೨೯ವ) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ೬೬, ಕಿನ್ನಿಮೂಲ್ಕಿ ಬಳಿ, ರವಿವಾರ ನಸುಕಿನ ಜಾವದಲ್ಲಿ ಈ ಅಪಘಾತ ಸಂಭವಿಸಿದೆ. ಟೆಂಪೋ ಮುಂಭಾಗ ಸಂಪೂರ್ಣವಾಗಿ ಜಜ್ಜೀ ಹೋಗಿದೆ. ಸಿಲುಕಿಕೊಂಡಿರುವ ಚಾಲಕನ ಮೃತದೇಹ ಹೊರತೆಗೆಯಲು ಸಾಹಸ ಪಡಬೇಕಾಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡು, ಸಂಚಾರಿ ಠಾಣೆಯ ಪೋಲಿಸರು ಹಾಗೂ ಸ್ಥಳೀಯರು ಮೃತದೇಹವನ್ನು ಹೊರತೆಗೆದರು. ಒಳಕಾಡುವರು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ರಕ್ಷಿಸಿಡುವ ವ್ಯವಸ್ಥೆಗೊಳಿಸಿದರು.


































