
ಬೀದರ್ ಅ ೦೬: ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಹಮಿಲಾಪೂರ ಗ್ರಾಮದಲ್ಲಿ “ಶಿಶುವಿಗೊಂದು ಸಸಿ” ಎಂಬ ವಿನೂತನ ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಅಭಿಯಾನಕ್ಕೆ ಶ್ರೀಮತಿ ಬಿ.ಜೆ. ಪಾರ್ವತಿ ವಿ. ಸೋನಾರೆ ಹಾಗೂ ಅಶ್ವಿನಿ ರುಕಮಂಪೂರ ಅವರು ಚಾಲನೆ ನೀಡಿ, ಗರ್ಭಿಣಿಯರಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸಿದರು. ಈ ವೇಳೆ ಗರ್ಭಿಣಿಯರ ಆರೋಗ್ಯ ವಿಚಾರಿಸಿ, ಗರ್ಭಾವಸ್ಥೆಯಲ್ಲಿ ಅನುಸರಿಸಬೇಕಾದ ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ ಸೇವನೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ತಾಯಿ ಮಗುವಿನ ಆರೋಗ್ಯದ ಕುರಿತು ಸಮಗ್ರ ಮಾಹಿತಿ ನೀಡಿದರು.
ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಪಾರ್ವತಿ ಸೋನಾರೆ ಅವರು ಮಾತನಾಡಿ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಹೆಸರಿನಲ್ಲಿ ಒಂದು ಸಸಿಯನ್ನು ನೆಟ್ಟು, ಅದನ್ನು ಪ್ರತಿದಿನ ನೀರೆರೆದು ಪೋಷಿಸುವಂತೆ ಗರ್ಭಿಣಿಯರಿಗೆ ಮನವಿ ಮಾಡಿದರು. ಹೀಗೆ ಮಾಡುವುದರಿಂದ ಮಗುವಿನ ಜನನಕ್ಕೂ ಮುನ್ನವೇ ಪ್ರಕೃತಿಯೊಂದಿಗೆ ಭಾವನಾತ್ಮಕ ನಂಟು ಬೆಳೆಸುವ ಅವಕಾಶ ದೊರೆಯುತ್ತದೆ. ಜೊತೆಗೆ, ಮಗು ಜನಿಸಿದ ಬಳಿಕ “ಇದು ನಿನ್ನ ಗಿಡ” ಎಂದು ತಿಳಿಸಿ ಅದರ ಕೈಯಿಂದಲೇ ಗಿಡಕ್ಕೆ ನೀರು ಹಾಕಿಸುವ ಮೂಲಕ ಪರಿಸರ ಸಂರಕ್ಷಣೆ ಮತ್ತು ನಿಸರ್ಗ ಪ್ರೀತಿಯ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸಬಹುದು, ನಾವು ಇಡೀ ಜಿಲ್ಲೆ ತುಂಬೆಲ್ಲಾ ಸುತ್ತಾಡಿ ಒಟ್ಟಾರೆ ೫ ಸಾವಿರ ಸಸಿ ಗರ್ಭಿಣಿಯರಿಗೆ ವಿತರಿಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದರು.
ಪರಿಸರ ಪ್ರೇಮಿ ಅಶ್ವಿನಿ ರುಕಮಂಪೂರ ಅವರು ಮಾತನಾಡಿ ಮುಂದಿನ ಪೀಳಿಗೆಗೆ ಹಸಿರೇ ಉಸಿರು ಎಂಬ ಅಮೂಲ್ಯ ಆಸ್ತಿಯನ್ನು ಉಳಿಸಿ ಬೆಳಸುವ ಸಂಕಲ್ಪದೊAದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಕುಟುಂಬವೂ ಒಂದು ಮಗುವಿನೊಂದಿಗೆ ಒಂದು ಗಿಡವನ್ನು ಬೆಳೆಸಿದರೆ ಪರಿಸರ ಸಂರಕ್ಷಣೆಗೆ ಮಹತ್ತರ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಗೀತಾ ಉಪಸ್ಥಿತರಿದ್ದು, ಗರ್ಭಿಣಿಯರಿಗೆ ಆರೋಗ್ಯ ಸಂಬAಧಿತ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.

































