
ಬೆಂಗಳೂರು, ಆ.೬- ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ವಶಪಡಿಸಿಕೊಂಡ ವಸ್ತುಗಳ ದುರ್ಬಳಕೆಯ ಆರೋಪ ಕೇಳಿಬಂದಿದೆ. ತೆರವು ಕಾರ್ಯಾಚರಣೆ ವೇಳೆ ಬಡ ವ್ಯಾಪಾರಿಗಳಿಂದ ವಶಪಡಿಸಿಕೊಂಡ ಕಬ್ಬಿಣದ ಶೆಡ್‌ಗಳು, ಕಬ್ಬಿಣ, ಕಟ್ಟಿಗೆ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ವಸ್ತುಗಳನ್ನು ನಿಯಮಾನುಸಾರ ಸಂಗ್ರಹಿಸದೆ, ಕೆಲ ಸಿಬ್ಬಂದಿ ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿ ಹಣ ಲಪಟಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನಗರದ ಫುಟ್‌ಪಾತ್‌ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಕಾರ್ಯಾಚರಣೆಯನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ತೀವ್ರಗೊಳಿಸಲಾಗಿದೆ. ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ೧,೫೦೦ ಕಿ.ಮೀ. ಫುಟ್‌ಪಾತ್‌ಗಳನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಪ್ರಮುಖ ರಸ್ತೆಗಳು ಹಾಗೂ ಫುಟ್‌ಪಾತ್‌ಗಳಲ್ಲಿ ತಾತ್ಕಾಲಿಕ ಶೆಡ್‌ಗಳು, ಅಂಗಡಿಗಳು ಮತ್ತು ಇತರೆ ನಿರ್ಮಾಣಗಳಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಫುಟ್‌ಪಾತ್ ಸ್ವಚ್ಛತಾ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಆದರೆ, ಇದೇ ಕಾರ್ಯಾಚರಣೆಯ ನೆಪದಲ್ಲಿ ಮತ್ತೊಂದು ರೀತಿಯ ‘ಗೋಲ್‌ಮಾಲ್’ ನಡೆಯುತ್ತಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ.
ಭೂಪಸಂದ್ರ ವಾರ್ಡ್‌ನಲ್ಲಿ ಆರೋಪ:
ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯ ಭೂಪಸಂದ್ರ ವಾರ್ಡ್‌ನಲ್ಲಿ ಇತ್ತೀಚೆಗೆ ನಡೆದ ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ ಅನಧಿಕೃತ ಬೋರ್ಡ್, ಬ್ಯಾನರ್, ಕಬ್ಬಿಣ, ಕಟ್ಟಿಗೆ, ಪ್ಲಾಸ್ಟಿಕ್ ಸೇರಿದಂತೆ ಹಲವು ವಸ್ತುಗಳನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.
ನಿಯಮದ ಪ್ರಕಾರ ವಶಪಡಿಸಿಕೊಂಡ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಸಂಬಂಧಪಟ್ಟ ಪ್ರಕ್ರಿಯೆಯಂತೆ ವಿಲೇವಾರಿ ಮಾಡಬೇಕಿತ್ತು. ಆದರೆ, ವಶಪಡಿಸಿಕೊಂಡ ಕಬ್ಬಿಣದ ಶೆಡ್‌ಗಳು ಹಾಗೂ ಇತರೆ ಕಬ್ಬಿಣದ ವಸ್ತುಗಳನ್ನು ಕೆಲ ಸಿಬ್ಬಂದಿ ಬೇರ್ಪಡಿಸಿ ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ವಶಪಡಿಸಿಕೊಂಡ ಶೆಡ್‌ಗಳ ಅವಶೇಷಗಳು ಎಲ್ಲಿವೆ? ಅವುಗಳನ್ನು ಯಾವ ಸ್ಥಳದಲ್ಲಿ ಸಂಗ್ರಹಿಸಲಾಗಿದೆ? ಎಷ್ಟು ಪ್ರಮಾಣದ ಕಬ್ಬಿಣ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಅವುಗಳ ವಿಲೇವಾರಿ ಹೇಗೆ ಮಾಡಲಾಗಿದೆ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.
ಅಧಿಕಾರಿಗಳ ನಿರ್ಲಕ್ಷ್ಯವೇ?
ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ, ಸಮರ್ಪಕ ಮಾಹಿತಿ ನೀಡದೆ ನಿರ್ಲಕ್ಷ್ಯ ಧೋರಣೆ ತಾಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆ ಕುರಿತು ಬೆಂಗಳೂರು ಉತ್ತರ ಪಾಲಿಕೆ ಆಯುಕ್ತ ಸುನೀಲ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ‘ಕ್ರಮ ಕೈಗೊಳ್ಳುತ್ತೇನೆ’ ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಬಡ ವ್ಯಾಪಾರಿಗಳಿಂದ ವಸ್ತುಗಳನ್ನು ವಶಪಡಿಸಿಕೊಳ್ಳುವುದು ಒಂದು ವಿಚಾರವಾದರೆ, ಅದೇ ವಸ್ತುಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡಿ ಹಣ ಮಾಡಿಕೊಳ್ಳುವುದು ಮತ್ತೊಂದು ಗಂಭೀರ ವಿಚಾರ. ಸಾರ್ವಜನಿಕ ಆಸ್ತಿಯಂತೆಯೇ ವಶಪಡಿಸಿಕೊಂಡ ವಸ್ತುಗಳಿಗೂ ಲೆಕ್ಕ ಇರಬೇಕಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ತೆರವು ಕಾರ್ಯಾಚರಣೆಗೆ ಪಾರದರ್ಶಕತೆ ಬೇಕು
ಫುಟ್‌ಪಾತ್ ತೆರವು ಕಾರ್ಯಾಚರಣೆಯ ಉದ್ದೇಶ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ಕಲ್ಪಿಸುವುದೇ ಆಗಿದ್ದರೆ, ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಪ್ರತಿಯೊಂದು ವಸ್ತುವಿಗೂ ಲೆಕ್ಕ ಇರಬೇಕು. ವಸ್ತುಗಳನ್ನು ಎಲ್ಲಿ ಸಂಗ್ರಹಿಸಲಾಗಿದೆ, ಎಷ್ಟು ಪ್ರಮಾಣದಲ್ಲಿದೆ, ನಂತರ ಹೇಗೆ ವಿಲೇವಾರಿ ಮಾಡಲಾಗಿದೆ ಎಂಬುದನ್ನು ಪಾಲಿಕೆ ಬಹಿರಂಗಪಡಿಸಬೇಕಿದೆ.
ಭೂಪಸಂದ್ರ ವಾರ್ಡ್‌ನಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬಡ ವ್ಯಾಪಾರಿಗಳ ಒತ್ತುವರಿ ತೆರವು ಹೆಸರಿನಲ್ಲಿ ಮತ್ತೊಂದು ರೀತಿಯ ‘ಗುಜರಿ ದಂಧೆ’ ನಡೆಯುತ್ತಿದೆ ಎಂಬ ಆರೋಪಗಳಿಗೆ ಇನ್ನಷ್ಟು ಬಲ ಸಿಗುವ ಸಾಧ್ಯತೆಯಿದೆ.
ಫುಟ್‌ಪಾತ್‌ಗಳು ಒತ್ತುವರಿ ಮುಕ್ತವಾಗಲಿ; ಆದರೆ ವಶಪಡಿಸಿಕೊಂಡ ಬಡವರ ವಸ್ತುಗಳು ಯಾರ ಪಾಲಾಗುತ್ತಿವೆ ಎಂಬುದಕ್ಕೂ ಲೆಕ್ಕ ಇರಲಿ ಎಂಬುದು ಸಾರ್ವಜನಿಕರ ಒತ್ತಾಯ.
ಈ ಕಳ್ಳಾಟಕ್ಕೆ ಹೊಣೆ ಯಾರು?
ವಶಪಡಿಸಿಕೊಂಡ ವಸ್ತುಗಳ ಲೆಕ್ಕ ಎಲ್ಲಿದೆ?
ಗುಜರಿಗೆ ಮಾರಾಟವಾಗಿದ್ದರೆ ಹಣ ಯಾರ ಜೇಬಿಗೆ?
ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಯಾವಾಗ?
ಇದೀಗ ಈ ಪ್ರಶ್ನೆಗಳಿಗೆ ಬೆಂಗಳೂರು ಉತ್ತರ ಪಾಲಿಕೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಉತ್ತರಿಸಬೇಕಿದೆ.

































