Home ಮುಖಪುಟ ಸುದ್ದಿ ಬಿಜೆಪಿ ನಾಯಕರು ಮನು ವಾದ ಬಿಟ್ಟು ಅಂಬೇಡ್ಕರ್ ಸಾಹಿತ್ಯ ಓದಲಿ

ಬಿಜೆಪಿ ನಾಯಕರು ಮನು ವಾದ ಬಿಟ್ಟು ಅಂಬೇಡ್ಕರ್ ಸಾಹಿತ್ಯ ಓದಲಿ

ಬೆಂಗಳೂರು,ಆ.೬: “ಹಿಂದೂ ರಾಷ್ಟ್ರ ನಿರ್ಮಾಣವಾದರೆ ದೇಶದ ಸ್ವಾತಂತ್ರ್ಯವೇ ಅಪಾಯಕ್ಕೆ ಸಿಲುಕಲಿದೆ” ಎಂಬ ಸಚಿವ ಡಾ. ಯತೀಂದ್ರ ಅವರ ಹೇಳಿಕೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನದ ಮೂಲ ತತ್ತ್ವಗಳು, ಆಡಳಿತ ಪಕ್ಷದ ಕೆಲಸಗಳು ಹಾಗೂ ಪ್ರತಿಪಕ್ಷಗಳ ಆರೋಪಗಳಿಗೆ ಸವಿಸ್ತಾರವಾಗಿ ತಿರುಗೇಟು ನೀಡಿದರು.

“ಹಿಂದೂ ರಾಜ್ಯ ಸ್ಥಾಪನೆಯಾದರೆ ಏನಾಗಲಿದೆ ಹಾಗೂ ಜಾತಿ ವ್ಯವಸ್ಥೆಯಿಂದ ಸಮಾಜದ ಮೇಲಾಗುವ ದಷ್ಪರಿಣಾಮಗಳ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಪುಸ್ತಕಗಳಲ್ಲೇ ಸ್ಪಷ್ಟವಾಗಿ ಬರೆದಿದ್ದಾರೆ. ಮನುವಾದಿಗಳು ಇರಬಾರದು ಎಂಬುದು ಮೊದಲಿನಿಂದಲೂ ಇರುವ ಆಶಯ. ಆದರೆ ಬಿಜೆಪಿ ನಾಯಕರು ಅಂಬೇಡ್ಕರ್ ಸಾಹಿತ್ಯವನ್ನು ಓದುವುದಿಲ್ಲ, ಬರೀ ಮನುವಾದವನ್ನು ಓದುತ್ತಾರೆ” ಎಂದು ವಾಗ್ದಾಳಿ ನಡೆಸಿದರು.

“ಹಿಂದೂಯಿಸಂ ಹಾಗೂ ಸನಾತನ ಧರ್ಮ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಆದರೆ ಇಂದು ೧೦೦ ವರ್ಷಗಳ ಇತಿಹಾಸವಿರುವ ಸಂಸ್ಥೆಗಳು ಕೇವಲ ಮೂರು ವರ್ಷದ ಹಿಂದಿನ ಇತಿಹಾಸವನ್ನು ಉಳಿಸಲು ಹೋರಾಟ ಮಾಡುತ್ತಿವೆ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ನೀಡುವುದೇ ಸಂವಿಧಾನದ ಮುಖ್ಯ ಆಶಯ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಕೂಡ ಅದನ್ನೇ ಪ್ರತಿಪಾದಿಸಿದ್ದಾರೆ” ಎಂದರು.

ರಾಜ್ಯ ಕಾಂಗ್ರೆಸ್ ಸಂಪುಟ ವಿಸ್ತರಣೆ ಕುರಿತು ಆಕ್ಷೇಪವೆತ್ತಿರುವ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ಸಂಪುಟದಲ್ಲಿ ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಬಿಜೆಪಿಯವರೇ ಪಟ್ಟಿ ನೀಡಲಿ. ನಾನು ಬಿಜೆಪಿಗೆ ಉತ್ತರ ನೀಡಲು ಬದ್ಧನಾಗಿದ್ದೇನೆಯೇ? ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ದೆಹಲಿಗೆ ಎಷ್ಟು ಜನ ನಾಯಕರು ಹೋಗಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಸಿ. ಟಿ. ರವಿ ಅಥವಾ ಯತ್ನಾಳ್ ಅವರಿಗೆ ತಮ್ಮ ಪಕ್ಷದಲ್ಲೇ ಅವಕಾಶ ನೀಡಲಿ, ಅದನ್ನು ಯಾರು ಬೇಡ ಎಂದಿದ್ದಾರೆ?” ಎಂದು ಪ್ರಶ್ನಿಸಿದರು.

ಇದೇ ವೇಳೆ, ’ಸಂಪುಟ ವಿಸ್ತರಣೆಯು ಪೇಮೆಂಟ್ ಕೋಟಾ’ ಎಂಬ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿ, “ನಮ್ಮ ಸರ್ಕಾರ ನಡೆಯುತ್ತಿರುವುದು ಬಿಜೆಪಿಯಿಂದಾಗಲಿ ಅಥವಾ ಕೇಶವಕೃಪಾದಿಂದಾಗಲಿ ಅಲ್ಲ. ಹಿಂದೆ ಸದನದಲ್ಲಿ ಯಾರು ಏನು ಮಾತನಾಡಬೇಕು ಎಂದು ಚೀಟಿ ಬರೆದುಕೊಡಲಾಗುತ್ತಿತ್ತು. ಆರ್.ಎಸ್.ಎಸ್. ಸರ್ಕಾರದ ಕೈಗೊಂಬೆ ಎಂದರೆ ಸದನವನ್ನೇ ಮುಗಿಸುತ್ತಿದ್ದರು. ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ” ಎಂದರು.

ಮಾಜಿ ಸಚಿವ ಅಶ್ವತ್ಥನಾರಾಯಣ ಅವರ ಕಚೇರಿ ಮುಂದೆ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮಾತನಾಡುತ್ತಾ, “ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಲು ಅಧಿಕಾರ ನೀಡಿದವರು ಯಾರು? ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಬೇಕು. ಬರೀ ರೀಲ್ಸ್ ಮಾಡಿದರೆ ಸಾಲದು. ಕಾಂಗ್ರೆಸ್ ಕಚೇರಿಗೆ ಬಸ್ಸಿನಲ್ಲಿ ಬಂದು ಪೋಸ್ಟರ್ ಅಂಟಿಸಿದ್ದು ಸರಿನಾ? ಪ್ರಧಾನಿಯವರು ಸಂಸತ್ತಿಗೆ ಬಂದು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಸ್ಪಷ್ಟನೆ ನೀಡಲಿ” ಎಂದು ಆಗ್ರಹಿಸಿದರು.

ಸಚಿವ ಆರ್. ಬಿ. ತಿಮ್ಮಾಪುರ ಹಾಗೂ ನಂಜಯ್ಯಮಠ್ ಆಡಿಯೋ ವೈರಲ್ ವಿಚಾರವಾಗಿ ಸ್ಪಷ್ಟನೆ ನೀಡಿದ ಪ್ರಿಯಾಂಕ್ ಖರ್ಗೆ, “ಸಂಬಂಧಪಟ್ಟ ಇಬ್ಬರೂ ನಾಯಕರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನನ್ನ ಅತ್ಯಂತ ಆಪ್ತ ಸ್ನೇಹಿತರು. ಅವರು ಕೇವಲ ಗಾಳಿಯಲ್ಲಿ ಆರೋಪ ಮಾಡುವುದನ್ನು ಬಿಟ್ಟು, ಗೃಹ ಸಚಿವನಾಗಿರುವ ನನಗೇ ಅಧಿಕೃತ ದೂರು ನೀಡಲಿ. ದೂರು ನೀಡಿದರೆ ತಕ್ಷಣವೇ ತನಿಖೆ ನಡೆಸುತ್ತೇನೆ. ಅಧಿವೇಶನ ಪ್ರಾರಂಭವಾಗಲಿದ್ದು, ಚರ್ಚೆಗೆ ಬರುವುದಿದ್ದರೆ ಬರಲಿ” ಎಂದು ಸವಾಲು ಎಸೆದರು.