
ಬೆಂಗಳೂರು, ಆ.೬- ಜೋರು ಮಳೆಗೆ ಮಣ್ಣು ಕುಸಿತ; ತಡೆಗೋಡೆ ಕುಸಿದು ಕಟ್ಟಡ ಒಂದು ಬದಿಗೆ ವಾಲಿಕೆ
ಮನೆ ಪಕ್ಕದ ಎರಡು ಕುಟುಂಬಗಳ ಸ್ಥಳಾಂತರ ಮಾಡಿ ,ಕಟ್ಟಡದ ಪಕ್ಕದಲ್ಲೆ ಇರುವ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ಗೃಹ ಪ್ರವೇಶಕ್ಕೂ ಮುನ್ನವೇ ಹೊಸದಾಗಿ ನಿರ್ಮಿಸಿದ್ದ ಮನೆ ಒಂದು ಬದಿಗೆ ವಾಲಿದ ಘಟನೆ ಬನ್ನೇರುಘಟ್ಟದ ಬಿಲ್ವಾರದಳ್ಳಿ ಗ್ರಾಮದ ನ್ಯೂ ವಿನ್ನರ್ಸ್ ಕಾಲೋನಿಯಲ್ಲಿ ನಡೆದಿದೆ.
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಖಾಸಗಿ ಶಾಲೆಯ ಪಕ್ಕದಲ್ಲಿದ್ದ ಸುಮಾರು ೨೫ ಅಡಿ ಎತ್ತರದ ತಡೆಗೋಡೆಯ ಬಳಿಯ ಮಣ್ಣು ಕುಸಿದಿದೆ. ಪರಿಣಾಮ, ಅದರ ಪಕ್ಕದಲ್ಲೇ ನಿರ್ಮಿಸಲಾಗಿದ್ದ ಒಂದು ಅಂತಸ್ತಿನ ಹೊಸ ಕಟ್ಟಡ ಒಂದು ಬದಿಗೆ ವಾಲಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ.
ತಡೆಗೋಡೆ ಕುಸಿತದಿಂದಾಗಿ ಕಟ್ಟಡದ ಅಡಿಪಾಯದ ಮಣ್ಣು ಕೂಡ ಕುಸಿದಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡ ಅಪಾಯದ ಅಂಚಿನಲ್ಲಿದೆ. ಮತ್ತೊಮ್ಮೆ ಭಾರಿ ಮಳೆ ಸುರಿದರೆ ಕಟ್ಟಡ ಸಂಪೂರ್ಣವಾಗಿ ನೆಲಕ್ಕುರುಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕಟ್ಟಡದ ಪಕ್ಕದಲ್ಲಿರುವ ಖಾಸಗಿ ಶಾಲೆಯೂ ಅಪಾಯಕ್ಕೆ ಸಿಲುಕಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ ರಜೆ ಘೋಷಿಸಲಾಗಿದೆ. ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಎರಡು ಕುಟುಂಬಗಳ ಸ್ಥಳಾಂತರ:
ಅಪಾಯದ ಹಿನ್ನೆಲೆಯಲ್ಲಿ ಕಟ್ಟಡದ ಪಕ್ಕದಲ್ಲಿದ್ದ ಎರಡು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸದರಿ ರಸ್ತೆಯ ಸಂಚಾರವನ್ನೂ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಘಟನೆಯ ಮಾಹಿತಿ ತಿಳಿದು ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಹಾಗೂ ಪಿಆರ್‌ಡಿ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಸುರಕ್ಷತೆ ಹಾಗೂ ತಡೆಗೋಡೆ ಕುಸಿತದ ಕುರಿತು ಪರಿಶೀಲನೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ.
ಧಾರಾಕಾರ ಮಳೆಯಿಂದಾಗಿ ಮಣ್ಣು ಮತ್ತಷ್ಟು ಕುಸಿದರೆ ಕಟ್ಟಡ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇರುವುದರಿಂದ ಸ್ಥಳೀಯರಲ್ಲಿ ಆತಂಕ ಮುಂದುವರಿದಿದೆ. ಅಧಿಕಾರಿಗಳು ಸ್ಥಳದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ.

































