Home ಸಿನೆಮಾ ರೊಮ್ಯಾಂಟಿಕ್ ಅವತಾರದಲ್ಲಿ ಹರೀಶ್ ರಾಜ್

ರೊಮ್ಯಾಂಟಿಕ್ ಅವತಾರದಲ್ಲಿ ಹರೀಶ್ ರಾಜ್

‘ಲವ್ ಕಾಕ್ಟೇಲ್’ ಮೂಲಕ ಹೊಸ ಪ್ರಯೋಗ

ನಟ, ನಿರ್ದೇಶಕ ಹರೀಶ್ ರಾಜ್ ಅಭಿನಯದ ‘ಲವ್ ಕಾಕ್ಟೇಲ್’ ಸಿನಿಮಾ ತನ್ನ ವಿಭಿನ್ನ ಪ್ರೇಮಕಥೆ ಮತ್ತು ಮನರಂಜನಾ ಶೈಲಿಯಿಂದ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಈ ಚಿತ್ರದಲ್ಲಿ ಹರೀಶ್ ರಾಜ್ ಸಂಪೂರ್ಣ ಹೊಸ ರೊಮ್ಯಾಂಟಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಇದುವರೆಗೂ ನೋಡದ ವಿಭಿನ್ನ ಪಾತ್ರವನ್ನು ಪರಿಚಯಿಸುತ್ತಿದ್ದಾರೆ.

ಪ್ರೇಮ ವೈಫಲ್ಯ ಜೀವನದ ಅಂತ್ಯವಲ್ಲ; ಅದನ್ನೂ ನಗುತ್ತಾ, ಸಂತೋಷದಿಂದ ಎದುರಿಸಬಹುದು ಎಂಬ ಸಂದೇಶವನ್ನು ಹಾಸ್ಯ ಮತ್ತು ಮನರಂಜನೆಯೊಂದಿಗೆ ಹೇಳುವ ಪ್ರಯತ್ನವನ್ನು ಚಿತ್ರ ಮಾಡಿದೆ. ಚಿತ್ರದ ಕಥೆಯನ್ನು ಹರೀಶ್ ರಾಜ್ ಅವರೇ ಬರೆದು ನಿರ್ದೇಶನವನ್ನೂ ನಿರ್ವಹಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ಹರೀಶ್ ರಾಜ್, “ಚಿತ್ರರಂಗದಲ್ಲಿ ನನ್ನ ಪಯಣಕ್ಕೆ 30 ವರ್ಷಗಳು, ಪೂರ್ಣಗೊಂಡಿವೆ. ಉಮೇಶ್ ಅವರು ಅದ್ಭುತ ಪಾತ್ರ ನಿರ್ವಹಿಸಿದ್ದರು. ಆದರೆ ಇಂದು ಅವರು ನಮ್ಮೊಂದಿಗಿಲ್ಲ ಎನ್ನುವುದು ಬೇಸರದ ಸಂಗತಿ. ಉಮಾಶ್ರೀ ಅವರ ಪಾತ್ರವೂ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು.

ನಿರ್ಮಾಪಕ ಪಿ. ಜನಾರ್ಧನ್ ಮಾತನಾಡಿ, ಉತ್ತಮ ಮನರಂಜನಾ ಚಿತ್ರ ಸಿದ್ಧವಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ” ಎಂದರು.

ನಟಿ ಅಭಿನಯ ಮಾತನಾಡಿ, “‘ನಾನು ಹೋಗ್ಲಿ ಬಿಡಿ ಸರ್’ ಧಾರಾವಾಹಿಯಲ್ಲಿ ಹರೀಶ್ ರಾಜ್ ಅವರೊಂದಿಗೆ ಕೆಲಸ ಮಾಡಿದ್ದೆ. ಆಗಲೇ ಅವರಲ್ಲಿರುವ ನಾಯಕನ ಸಾಮರ್ಥ್ಯವನ್ನು ಹೇಳಿದ್ದೆ. ಬಹಳ ವರ್ಷಗಳ ನಂತರ ಅವರು ಈ ಚಿತ್ರದ ಮೂಲಕ ನನಗೆ ಉತ್ತಮ ಪಾತ್ರ ನೀಡಿರುವುದು ಸಂತಸ ತಂದಿದೆ” ಎಂದು ತಿಳಿಸಿದರು.

ಶ್ರೀ ಲಕ್ಷ್ಮೀ ಜನಾರ್ಧನ ಬ್ಯಾನರ್ ಅಡಿಯಲ್ಲಿ ಪಿ. ಜನಾರ್ಧನ್ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ ನೀಡಿದ್ದಾರೆ. ರಾಜಾ ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ ನಿರ್ವಹಿಸಿದ್ದು, ಚಿತ್ರದ ಸಾರ್ವಜನಿಕ ಸಂಪರ್ಕವನ್ನು ರಮಿತ್ ಏಲಕ್ಕಿ ವಹಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಹರೀಶ್ ರಾಜ್, ಪ್ರಕೃತಿ ಪ್ರಸಾದ್, ತಬಲಾ ನಾಣಿ, ಅಶೋಕ್, ಉಮಾಶ್ರೀ, ಅಭಿನಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರೀತಿ, ಹಾಸ್ಯ ಮತ್ತು ಭಾವನೆಗಳ ಸಂಗಮವಾಗಿ ಮೂಡಿಬಂದಿರುವ ‘ಲವ್ ಕಾಕ್ಟೇಲ್’ ಪ್ರೇಕ್ಷಕರಿಗೆ ಮನರಂಜನೆಯ ಹೊಸ ಅನುಭವ ನೀಡುವ ನಿರೀಕ್ಷೆಯಲ್ಲಿದೆ.