
ಮಂಗಳೂರು: ಮುಂದೆ ರಚನೆಯಾಗಲಿರುವ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಬಿ.ಕೆ ಹರಿಪ್ರಸಾದ್ ರಿಗೆ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಭಾರತ ಬಿಲ್ಲವರ ಸಂಘಟನೆ ಆಗ್ರಹಿಸಿದೆ.
ಕುದ್ರೋಳಿಯ ಶ್ರೀ ಗೋಕರ್ಣ ಕ್ಷೇತ್ರದ ಸಭಾಂಗಣದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕು ಎನ್ನುವುದು ಬಿಲ್ಲವ ಸಮಾಜದ ಮನವಿಯಾಗಿದೆ ಎಂದರು
ಬಿ.ಕೆ.ಹರಿಪ್ರಸಾದ್ ಬಿಲ್ಲವ ಸಮಾಜದ ಅಗ್ರಗಣ್ಯ ನಾಯಕರು, ಹಿರಿಯ ಮುತ್ಸದ್ದಿ ಮತ್ತು ಅನುಭವಿ ರಾಜಕಾರಣಿ. ರಾಜ್ಯಸಭಾ ಸದಸ್ಯರಾಗಿ, ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ನ್ಯಾಯದ ಪರವಾಗಿ ಯಾವುದೇ ರಾಜಿಯಿಲ್ಲದೆ ಹೋರಾಡಿದವರು. ಜಾತ್ಯತೀತ ತತ್ವವನ್ನು ಪಾಲಿಸಿಕೊಂಡು ಬಂದವರು. ಬ್ರಹ್ಮಶ್ರೀ ನಾರಾಯಣ ಗುರುಗಳ ಅಪಾರ ಭಕ್ತರಾಗಿದ್ದು, ಅವರ ಸಂದೇಶಗಳನ್ನು ದಾರಿದೀಪವಾಗಿಟ್ಟು ಬೆಳೆದವರು. ಇತ್ತೀಚಿಗೆ ಬಹಳ ಅರ್ಥಪೂರ್ಣವಾಗಿ ಸರ್ವಸ್ವರ್ಶಿಯಾಗಿ ನಡೆದ ಗುರು-ಗಾಂಧಿ ಸಂವಾದದ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಿರ್ವಹಿಸಿ ಜಿಲ್ಲೆಯ ಘನತೆಯನ್ನು ದೇಶಾದ್ಯಂತ ಪಸರಿಸಿದ ಅದ್ಭುತ ಸಂಘಟಕ. ಅವರಿಗೆ ಮುಂದೆ ರಚನೆಯಾಗುವ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೇಕೆಂದು ಅಖಿಲ ಭಾರತ ಬಿಲ್ಲವ ಸಮಾಜದ ಒಕ್ಕೊರಲಿನ ಆಗ್ರಹವಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವರು ಬಹುಸಂಖ್ಯಾತರು, ಆದರೆ ರಾಜಕೀಯದಲ್ಲಿ ಸ್ನಾನಮಾನದಲ್ಲಿ ಸದರಿ ಅನುಪಾತದಂತೆ ಮಾನ್ಯತೆ ದೊರೆಯದಿರುವುದು ವಿಷಾದನೀಯ ಎಂದರು.
ಹಿಂದುಳಿದ ಸಮಾಜದ ನಾಯಕರಾದ ಶೋಷಿತ ವರ್ಗಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕಯಿಂದ ಶ್ರಮಿಸುತ್ತಿರುವ ನಾಯಕರಲ್ಲಿ ಹರಿಪ್ರಸಾದ್ ರವರು ಪ್ರಮುಖರು. ಮಂತ್ರಿ ಮಂಡಲದಲ್ಲಿ ಅವರ ಉಪಸ್ಥಿತಿ ಉತ್ತಮ ಸಂಸದೀಯ ಪಟುವಿನ ಸ್ಥಾನವನ್ನು ಪಡೆಯಲಿದೆ ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಸಮಾಜದ ಪ್ರಮುಖರಾದ ಪದ್ಮನಾಭ ಕೋಟ್ಯಾನ್, ಸೋಮಸುಂದರ್, ಗಣೇಶ್ ಪೂಜಾರಿ, ಪ್ರವೀಳಾ ,ರಾಜೇಂದ್ರ ಚಿಲಿಂಬಿ ಮತ್ತಿತರರು ಉಪಸ್ಥಿತರಿದ್ದರು.


































