Home ಜಿಲ್ಲೆ ಮಂಗಳೂರು ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ ೬ ತಿಂಗಳು ಜೈಲು, ದಂಡ ವಿಧಿಸಿದ ಬೆಳ್ತಂಗಡಿ ನ್ಯಾಯಾಲಯ

ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ ೬ ತಿಂಗಳು ಜೈಲು, ದಂಡ ವಿಧಿಸಿದ ಬೆಳ್ತಂಗಡಿ ನ್ಯಾಯಾಲಯ

ಬೆಳ್ತಂಗಡಿ: ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆಗೆ ೬ ತಿಂಗಳ ಸಾದಾ ಶಿಕ್ಷೆ ಹಾಗೂ ೧೦,೦೦೦ ರೂಪಾಯಿ ದಂಡ ವಿಧಿಸಿ ಇಲ್ಲಿನ ಮಾನ್ಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
ದಿನಾಂಕ ೨೩-೦೭-೨೦೧೫ ರಂದು ಬೆಳ್ತಂಗಡಿ ತಾಲೂಕು ಕಛೇರಿ ಬಳಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಬೆಳ್ತಂಗಡಿ ವಲಯ ಸಂಘಟನೆಯ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮಹಮ್ಮದ್ ರಿಯಾಜ್ ಫರಂಗಿಪೇಟೆ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಹಾಗೂ ಸಮಾಜದಲ್ಲಿ ಶಾಂತಿ ಕದಡುವಂತೆ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಹಾಗೂ ತನಿಖಾಧಿಕಾರಿಯಾಗಿದ್ದ ರವಿ ಬಿ.ಎಸ್. ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಐಪಿಸಿ ಕಲಂ ೧೫೩(ಂ) ಅಡಿಯಲ್ಲಿ ೬ ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ಹಾಗೂ ?೧೦,೦೦೦/- ದಂಡ ವಿಧಿಸಿ ಆದೇಶಿಸಿದೆ.
ಸದ್ರಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಆಶೀತ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.