Home ಜಿಲ್ಲೆ ಮಂಗಳೂರು ತುಳುವಿನ ಸಾಹಿತ್ಯ ಸಮೃದ್ಧವಾಗಿದೆ: ತಾರಾನಾಥ ಗಟ್ಟಿ

ತುಳುವಿನ ಸಾಹಿತ್ಯ ಸಮೃದ್ಧವಾಗಿದೆ: ತಾರಾನಾಥ ಗಟ್ಟಿ

ಮಂಗಳೂರು, ಆ.೪: ’ತುಳುವಿನ ಸಾಹಿತ್ಯ ಸಮೃದ್ಧವಾಗಿದೆ. ಆದರೆ, ಹೊಸ ತಲೆಮಾರಿನ ತುಳುವರಿಗೆ ಅದರ ಪರಿಚಯವೇ ಇಲ್ಲ. ಒತ್ತಾಯ ಪೂರ್ವಕವಾಗಿಯಾದರೂ ಅವರಿಗೆ ತುಳು ಸಾಹಿತ್ಯವನ್ನು ತಲುಪಿಸಬೇಕಿದೆ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.
ಕರಾವಳಿ ಲೇಖಕಿಯರ, ವಾಚಕಿಯರ ಸಂಘ ಹಾಗೂ ಆಕೃತಿ ಆಶ್ರಯ ಪ್ರಕಾಶನದ ಆಶ್ರಯದಲ್ಲಿ ತುಳುಭವನದಲ್ಲಿ ಸೋಮವಾರ (ಆ.೩)ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೇವಿಕಾ ನಾಗೇಶ್ ಅವರ ’ಬೊಲ್ಪುದ ಷಾಂತೆ’ (ಬೆಳಕಿನ ಪತಂಗ) ಕವನ ಸಂಕಲನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
’ಯುವಜನರು ತುಳು ಕೃತಿಗಳನ್ನು ಓದುವಂತೆ ಮಾಡಿದರೆ, ಅದು ಮತ್ತಷ್ಟು ಸಾಹಿತ್ಯ ಕೃಷಿಗೆ ಪ್ರೇರಣೆ ಆಗಬಹುದು’ ಎಂದರು.
ಕೃತಿ ಪರಿಚಯಿಸಿದ ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜ್ಯೋತಿ ಚೇಳ್ಯಾರು ಅವರು ’ಹೊಸ ಹೊಸ ರೂಪಕ ಮತ್ತು ಪ್ರತಿಮೆಗಳನ್ನು ಬಳಸಿ ಕವಯಿತ್ರಿ ದೇವಿಕಾ ನಾಗೇಶ್ ಬದುಕಿನ ವಿಭಿನ್ನ ಅಂಶಗಳನ್ನು ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರ ಕವನಗಳು ಲೋಕವನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡುತ್ತವೆ’ ಎಂದು ಅಭಿಪ್ರಾಯಪಟ್ಟರು.
’ದೇವಿಕಾ ಅವರ ಗಟ್ಟಿ ಧ್ವನಿಯ ಚಿಂತನೆಗಳು ’ಬೊಲ್ಪುದ ಪಾಂತೆ’ಯ ರೂಪ ತಾಳಿವೆ. ಈ ಪತಂಗಗಳು ಬೆಳಕಿನೆಡೆಗೆ ಹಾರುತ್ತವೆಯೇ, ಕತ್ತಲೆಯಡೆ ಹಾರುತ್ತವೆಯೇ ಎಂಬುದು ಮುಖ್ಯ ಇದರ ವಿಚಾರ ಪೂರ್ಣ ಕವಿತೆಗಳು ನಾವೂ ಪತಂಗಗಳಾಗಬೇಕೇ ಅಥವಾ ರಕ್ಕೆ ಸುಟ್ಟುಕೊಳ್ಳದೆಯೇ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕೆ ಎಂಬ ಜಿಜ್ಞಾಸೆಯನ್ನು ಹುಟ್ಟಿಸುತ್ತವೆ. ಕವಿತೆಗಳ ವಿನ್ಯಾಸ, ಲಾಲಿತ್ಯಗಳಲ್ಲಿ ಅವರದ್ದೇ ವಿಭಿನ್ನ ಶೈಲಿ. ಅವರು ಬಳಸಿರುವ ತುಳು ಕೂಡಾ ವೈಶಿಷ್ಟಪೂರ್ಣವಾಗಿದ್ದು ಉಡುಪಿ, ಮಂಗಳೂರು ಹಾಗೂ ಘಟ್ಟದ ಮೇಲಿನ ತುಳುವಿನ ಸಮ್ಮಿಲನದಂತಿದೆ’ ಎಂದರು.
ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕಿ ದೇವಿಕಾ ನಾಗೇಶ್, ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿದರು. ಧನಲಕ್ಷ್ಮಿಗಟ್ಟಿ ಶೀಲಾ ಶೆಟ್ಟಿ, ರತ್ನಾವತಿ ಜೆ.ಬೈಕಾಡಿ, ಸೌಮ್ಯಾ ಪ್ರವೀಣ್ ಅವರು ಕವನ ಸಂಕಲನದ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಿದರು. ಸಂಗೀತಾ ಸಾಧಕಿ ಜಯಲಕ್ಷ್ಮಿ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
ರೂಪಕಲಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಸ್ವಾಗತಿಸಿದರು. ಯಶೋದಾ ಮೋಹನ್ ವಂದಿಸಿದರು.