
ಮಂಗಳೂರು-ಹೆಚ್.ಪಿ.ವಿ ಲಸಿಕೆ ಸುರಕ್ಷಿತವಾಗಿದ್ದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ೧೪-೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ನೀಡುವ ಉಚಿತ ಹೆಚ್.ಪಿ.ವಿ ಲಸಿಕಾ ಅಭಿಯಾನದ ಕುರಿತು ಶಾಲೆಗಳಲ್ಲಿ ಸಭೆ ನಡೆಸುವ ಮೂಲಕ ಅಥವಾ ಇತರ ಇಲಾಖೆಗಳ ಸಹಕಾರದಿಂದ ಪೋಷಕರಿಗೆ ಮಾಹಿತಿ ನೀಡಬೇಕು. ಲಸಿಕೆಯು ಸುರಕ್ಷಿತವಲ್ಲ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು ಎಂದು ಗ್ರೇಡ್-೨ ತಹಶೀಲ್ದಾರ್ ರಫೀಕ್ ಚೌಧರಿ ಸೂಚಿಸಿದರು.
ಅವರು ಮಂಗಳೂರು ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಹೆಚ್.ಪಿ.ವಿ ಲಸಿಕಾ ಅಭಿಯಾನ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ, ಶುಚಿ ಕಾರ್ಯಕ್ರಮದಡಿಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಪೂರೈಕೆ ಬಗ್ಗೆ, ಆಶಾ ಕುಂದುಕೊರತೆ ಸಮಿತಿ ಸಭೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಚ್.ಪಿ.ವಿ ಲಸಿಕೆಯ ಬಗ್ಗೆ ಪೋಷಕರು ಮಾಹಿತಿ ಕೊರತೆಯಿಂದ ಲಸಿಕೆ ಕೊಡಿಸಲು ನಿರಾಕರಿಸುತ್ತಿದ್ದು, ಲಸಿಕೆಯ ಅವಶ್ಯಕತೆ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಯುವ ಬಗ್ಗೆ ಸರಿಯಾದ ಅರಿವು ಮೂಡಿಸಬೇಕು. ೩೫ ವರ್ಷ ಕಳೆದ ಮಹಿಳೆಯರು ಗರ್ಭಕಂಠದ ತಪಾಸಣೆಯನ್ನು ಮಾಡಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಅವರು ಸೂಚಿಸಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಯುವಕರನ್ನು ತಂಬಾಕಿನ ಹಸ್ತ ಕ್ಷೇಪದಿಂದ ರಕ್ಷಿಸಲು ಸಾಮಾಜಿಕ ಮಾಧ್ಯಮದ ಮೂಲಕ ಅರಿವು ಮೂಡಿಸಬೇಕು. ಸಮುದಾಯ ಶಾಲಾ ಕಾಲೇಜು ಮತ್ತು ಗ್ರಾಮ ಪಂಚಾಯತ್ ಸಮನ್ವಯದೊಂದಿಗೆ ಐ.ಇ.ಸಿ ಚಟುವಟಿಕೆಗಳನ್ನು ಹಮ್ಮಿಕೊಂಡು ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತವಾಗಿಸಲು ಕ್ರಮ ವಹಿಸಲಾಗುತ್ತಿದೆ. ಕೋಟ್ಪಾ ಕಾರ್ಯಾಚರಣೆಯಡಿ ಜನವರಿ ೨೦೨೬ ರಿಂದ ಜುಲೈ ೨೦೨೬ ರವರೆಗೆ ಮಂಗಳೂರು ತಾಲೂಕಿನಲ್ಲಿ ೧೭೫ ಪ್ರಕರಣಗಳು ದಾಖಲಾಗಿದ್ದು, ೩೧,೨೫೦ ದಂಡ ಸಂಗ್ರಹಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಸಭೆಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದಡಿದಡಿ ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಮಾತ್ರೆಗಳನ್ನು ನೀಡಬೇಕು. ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳು ಮಾತ್ರೆ ತೆಗೆದುಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಮಾಪ್ ಅಪ್ ದಿನದಂದು ಮಾತ್ರೆ ನೀಡಬೇಕು. ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಸೂಚಿಸಿದರು.
ಮಳೆ ನಿರಂತರವಾಗಿ ಬರದೆ ಇರುವುದರಿಂದ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಂಮಿಕ ರೋಗಗಳು ಬರುತ್ತದೆ. ಆದ್ದರಿಂದ ನೈರ್ಮಲ್ಯ ಕಾಪಾಡಿಕೊಂಡು, ಶುದ್ಧ ಕುಡಿಯುವ ನೀರು ಮತ್ತು ಗುಣಮಟ್ಟದ ಆಹಾರವನ್ನು ಬಳಸಬೇಕು ಎಂದರು.
ಆಶಾಕಾರ್ಯಕರ್ತೆಯರ ಮನೆ ಮನೆ ಭೇಟಿ: ಅಗತ್ಯ ದಾಖಲೆ ನೀಡಿ ಸಹಕರಿಸಲು ಸೂಚನೆ
ಸಮಸ್ತ ಏಕೀಕೃತ ಸಮುದಾಯ ಆರೋಗ್ಯ ಡಿಜಿಟಲ್ ತಂತ್ರಾಂಶ ಸಂಬಂಧಿಸಿದಂತೆ ಡಿಜಿಟಲ್ ಆರೋಗ್ಯ ಸಮೀಕ್ಷೆ, ಕುಟುಂಬ ಕಲ್ಯಾಣದಡಿ ತಾಯಿ ಮತ್ತು ಮಕ್ಕಳ ಆರೋಗ್ಯ ಘಟಕಗಳ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಆಶಾಕಾರ್ಯಕರ್ತೆಯರು ಮನೆ ಮನೆ ಭೇಟಿ ಸಂದರ್ಭದಲ್ಲಿ ಅವರಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಲು ತಾಲೂಕು ಆರೋಗ್ಯಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಮತ್ತಿತ್ತರರು ಇದ್ದರು.


































