Home ಜಿಲ್ಲೆ ಬೆಂಗಳೂರು ಬೆಂಗಳೂರು ಜಾತ್ರೆಗೆ ಸ್ಥಳೀಯ ಪ್ರತಿಭೆಗಳೇ ಮೆರುಗು: ಕೆ.ಎನ್. ರಮೇಶ್,೧೫ರಿಂದ ೨೦ ಉದ್ಯಾನವನ, ಕೆರೆಗಳ ಆವರಣದಲ್ಲಿ ಸಾಂಸ್ಕೃತಿಕ...

ಬೆಂಗಳೂರು ಜಾತ್ರೆಗೆ ಸ್ಥಳೀಯ ಪ್ರತಿಭೆಗಳೇ ಮೆರುಗು: ಕೆ.ಎನ್. ರಮೇಶ್,೧೫ರಿಂದ ೨೦ ಉದ್ಯಾನವನ, ಕೆರೆಗಳ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ:

ಬೆಂಗಳೂರು, ನ. ೨೩: ಬೆಂಗಳೂರು ಜಾತ್ರೆಯನ್ನು ಜನೋತ್ಸವವನ್ನಾಗಿ ರೂಪಿಸಲು ನಾಗರಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಖWಂ) ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಕರೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಖWಂ ಪದಾಧಿಕಾರಿಗಳೊಂದಿಗೆ ಆಯುಕ್ತರು ನಡೆಸಿದ ಸಮಾಲೋಚನಾ ಸಭೆಯಲ್ಲಿ, ಡಿಸೆಂಬರ್ ೪ರಿಂದ ೧೩ರವರೆಗೆ ನಡೆಯಲಿರುವ ಬೆಂಗಳೂರು ಜಾತ್ರೆಯ ಸಿದ್ಧತೆ ಹಾಗೂ ವಾರ್ಡ್‌ಗಳಲ್ಲಿನ ಮೂಲಸೌಕರ್ಯ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಈ ಬಾರಿ ಬೆಂಗಳೂರು ಜಾತ್ರೆಯನ್ನು ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸದೆ, ವಿಕೇಂದ್ರೀಕರಣಗೊಳಿಸಲಾಗುತ್ತಿದೆ. ಬೊಮ್ಮನಹಳ್ಳಿ ಮತ್ತು ಜಯನಗರ ವಲಯಗಳ ಸುಮಾರು ೧೫ರಿಂದ ೨೦ ಉದ್ಯಾನವನಗಳು, ಕೆರೆಗಳ ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸ್ಥಳೀಯ ಕಲಾವಿದರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುತ್ತದೆ. ರಂಗೋಲಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜಾತ್ರೆಯನ್ನು ಜನೋತ್ಸವವನ್ನಾಗಿಸಲು ಖWಂಗಳು ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದರು.
ಕೋರಮಂಗಲ, ಬಿಟಿಎಂ ಲೇಔಟ್ ಮತ್ತು ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಆನ್‌ಸ್ಟ್ರೀಟ್ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಒಂದೆರಡು ತಿಂಗಳಲ್ಲಿ ವ್ಯವಸ್ಥೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು. ವಾಣಿಜ್ಯ ಕಟ್ಟಡಗಳ ಬೇಸ್‌ಮೆಂಟ್ ಪಾರ್ಕಿಂಗ್ ಸ್ಥಳಗಳನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿರುವ ಕುರಿತು ಪರಿಶೀಲಿಸಿ ದಂಡ ವಿಧಿಸಲಾಗುವುದು. ಫುಟ್‌ಪಾತ್‌ಗಳ ಮೇಲಿನ ಶಾಶ್ವತ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು ಎಂದರು.
ಕೋರಮಂಗಲದ ಸೋನಿ ವರ್ಲ್ಡ್ ಜಂಕ್ಷನ್ ಬಳಿಯ ಕೆ-೧೦೦ ರಾಜಕಾಲುವೆಯಲ್ಲಿ ಹೂಳು ತುಂಬಿದ್ದು, ತ್ಯಾಜ್ಯ ಸುರಿಯುತ್ತಿರುವುದರಿಂದ ನಿರ್ವಹಣೆಗೆ ತೊಂದರೆಯಾಗಿದೆ ಎಂದು ನಿವಾಸಿಗಳು ದೂರಿದರು. ಸರ್ಜಾಪುರ ಮುಖ್ಯರಸ್ತೆಯ ಸಮೀಪದ ಕೋರಮಂಗಲ ಮೊದಲನೇ ಕ್ರಾಸ್ ಸರ್ವಿಸ್ ರಸ್ತೆಯಲ್ಲಿ ಸಿಎನ್‌ಜಿ ಪಂಪ್‌ನಿಂದಾಗಿ ಆಟೋ ಮತ್ತು ಟ್ಯಾಕ್ಸಿಗಳು ಸಾಲುಗಟ್ಟಿ ನಿಲ್ಲುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದರು.
ಸೋಮಸುಂದರಪಾಳ್ಯದಿಂದ ಕೂಡ್ಲು ಸಂಪರ್ಕಿಸುವ ರಸ್ತೆಯ ಒಳಚರಂಡಿ ಚೇಂಬರ್‌ಗಳ ಅಪಾಯಕಾರಿ ಸ್ಥಿತಿ, ಹರಳೂರಿನ ಸಿಲ್ವರ್ ಕೌಂಟಿ ರಸ್ತೆ ಸಮಸ್ಯೆ, ಸಾರಕ್ಕಿ ಕೆರೆಯಿಂದ ಸಿದ್ದೇಶ್ವರ ಟಾಕೀಸ್ ಮೂಲಕ ೧೫ನೇ ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯು ಜಲಮಂಡಳಿ ಕಾಮಗಾರಿಯಿಂದ ಹದಗೆಟ್ಟಿರುವ ಬಗ್ಗೆಯೂ ಗಮನ ಸೆಳೆದರು.
ಉದ್ಯಾನವನಗಳ ಸ್ವಚ್ಛತೆ, ಸ್ಕೈವಾಕ್‌ಗೆ ಲಿಫ್ಟ್ ಅಳವಡಿಕೆಗೆ ಆಗ್ರಹ
ಎಚ್‌ಎಸ್‌ಆರ್ ಲೇಔಟ್‌ನ ಶಾಲಿನಿ ಮೈದಾನ ಮತ್ತು ಎನ್‌ಎಎಚ್ ಮೈದಾನಗಳಲ್ಲಿ ರಾತ್ರಿ ವೇಳೆ ಮದ್ಯದ ಬಾಟಲಿಗಳು ಹಾಗೂ ಕಸ ಬಿದ್ದಿರುವುದರಿಂದ ಅನೈರ್ಮಲ್ಯ ಉಂಟಾಗುತ್ತಿದೆ ಎಂದು ನಿವಾಸಿಗಳು ದೂರಿದರು. ಐದನೇ ಸೆಕ್ಟರ್‌ನ ಮೈ ಬೇಬಿ ಸ್ಟೋರ್ ಬಳಿಯ ಸ್ಕೈವಾಕ್ ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಲಿಫ್ಟ್ ಅಳವಡಿಸದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ೨೪ನೇ ಮುಖ್ಯರಸ್ತೆಯ ಫುಟ್‌ಪಾತ್ ದುರಸ್ತಿಗೂ ಮನವಿ ಮಾಡಿದರು.
ಮಹಾವೀರ್ ಸೀಸನ್ ಅಪಾರ್ಟ್‌ಮೆಂಟ್, ಕುಮಾರಸ್ವಾಮಿ ಲೇಔಟ್, ರಾಘವನ್ ಪಾಳ್ಯ, ಇಸ್ರೋ ಲೇಔಟ್, ಪೂರ್ಣಪ್ರಜ್ಞ ಲೇಔಟ್ ಮತ್ತು ಅಂಜನಾಪುರದ ರಾಯಲ್ ಪಾರ್ಕ್ ರೆಸಿಡೆನ್ಸಿ ಬಳಿ ಒಣಗಿದ ಬೃಹತ್ ಮರಗಳನ್ನು ತೆರವುಗೊಳಿಸುವಂತೆ ಕೋರಿದರು. ಸುಬ್ರಹ್ಮಣ್ಯಪುರ ಕೆರೆಯಲ್ಲಿ ಜಲಕಳೆ ತುಂಬಿರುವ ಬಗ್ಗೆಯೂ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕಸ ವಿಲೇವಾರಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಒತ್ತಾಯ
ಬಿಟಿಎಂ ಲೇಔಟ್‌ನ ಕುವೆಂಪು ವಾರ್ಡ್‌ನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಏಳು ಮಹಡಿಗಳ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದರು. ರಾಘವನ್ ಪಾಳ್ಯದ ಗುರುಕುಲ ಶಾಲೆ ಬಳಿ ಹಾಗೂ ಪದ್ಮನಾಭನಗರದ ಡೆಕ್ಕನ್ ಶಾಲೆ ರಸ್ತೆಯಲ್ಲಿ ಕಸ ಸುರಿಯುವುದು ಮತ್ತು ಬೆಂಕಿ ಹಚ್ಚುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಕನಕಪುರ ರಸ್ತೆಯ ಐಕಿಯಾ ಮಾಲ್ ಬಳಿ ತಿಪ್ಪಸಂದ್ರಕ್ಕೆ ತಿರುವು ಪಡೆಯುವ ಸ್ಥಳದಲ್ಲಿನ ಸಂಚಾರ ದಟ್ಟಣೆ ನಿಯಂತ್ರಣ, ಕುಮಾರಸ್ವಾಮಿ ಲೇಔಟ್ ಬಸ್ ನಿಲ್ದಾಣದ ಬಳಿ ಮಾಂಸದ ಅಂಗಡಿಗಳ ಫುಟ್‌ಪಾತ್ ಒತ್ತುವರಿ ತೆರವು ಹಾಗೂ ಪದ್ಮನಾಭನಗರ, ಯಲಚೇನಹಳ್ಳಿ, ಬೈರಸಂದ್ರ ಮತ್ತು ಗುರಪ್ಪನಪಾಳ್ಯ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಗುತ್ತಿಗೆದಾರರ ಅಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ದೂರು ನೀಡಿದರು. ಎಚ್‌ಎಂಟಿ ಟ್ಯಾಂಬರಿನ್ ಪಕ್ಕದ ಟಾಟಾ ಮೋಟಾರ್ಸ್ ಶೋರೂಮ್‌ನವರು ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸಿ ಪಾದಚಾರಿಗಳಿಗೆ ತೊಂದರೆ ಉಂಟುಮಾಡುತ್ತಿರುವುದನ್ನೂ ಪ್ರಸ್ತಾಪಿಸಿದರು.

ವಾರ್ಡ್ ಸಮಸ್ಯೆಗಳ ಪಟ್ಟಿ ಸಲ್ಲಿಸಲು ಸೂಚನೆ:
ನಾಗರಿಕರ ಸಮಸ್ಯೆಗಳನ್ನು ಆಲಿಸಲು ತಾವೇ ಖುದ್ದಾಗಿ ವಾರ್ಡ್‌ಗಳಿಗೆ ಭೇಟಿ ನೀಡುವುದಾಗಿ ಆಯುಕ್ತ ಕೆ.ಎನ್. ರಮೇಶ್ ಭರವಸೆ ನೀಡಿದರು. ಇದಕ್ಕೂ ಮುನ್ನ ಪ್ರತಿ ಖWಂ ತನ್ನ ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ನಿಗದಿತ ಪ್ರವಾಸಕ್ಕೆ ೧೦ ದಿನಗಳ ಮುಂಚಿತವಾಗಿ ಪಾಲಿಕೆ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಸಲ್ಲಿಕೆಯಾದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳ ತಂಡದೊಂದಿಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ಮತ್ತು ನಾಗರಿಕರ ನಡುವೆ ಸಮನ್ವಯ ಸಾಧಿಸಲು ಪ್ರತಿ ವಾರ್ಡ್‌ನಲ್ಲೂ ಆಸಕ್ತ ನಾಗರಿಕರನ್ನು ’ವಾರ್ಡ್ ವಾಲಂಟಿಯರ್’ಗಳಾಗಿ ನೇಮಿಸಿ ಅಧಿಕೃತವಾಗಿ ಗುರುತಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯ ಅಭಿಯಂತರ ಬಸವರಾಜ ಕಬಾಡೆ ಸೇರಿದಂತೆ ಅರಣ್ಯ, ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.