
ಮಾಲೂರು, ನ. ೨೩- ಟೇಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಗ್ಗೆ ಶಾಸಕ ಕೆ.ವೈ. ನಂಜೇಗೌಡರ ವಿರುದ್ಧ ಕಾಂಗ್ರೆಸ್ ಯುವ ಮುಖಂಡ ಸತೀಶ್ ರಾಜಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲುವಗುಳಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೇಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವೇಳೆ ಪಕ್ಷದ ಸಂಘಾಟನಾ ನಿಯಮಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಸುಮಾರು ೨೦ ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ, ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ತಾವು, ಈ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದೇವೆ ಎಂದರು.
ಆದರೆ, ಇತ್ತೀಚೆಗೆ ನಡೆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಸರಿಯಾದ ಪ್ರಕ್ರಿಯೆ ಅನುಸರಿಸದೆ, ಶಾಸಕ ನಂಜೇಗೌಡರು ತಮ್ಮ ಪುತ್ರ ಸುನಿಲ್ ಗೌಡ ಅವರನ್ನು ಟೇಕಲ್ ಜಿಲ್ಲಾ ಪಂಚಾಯಿತಿ ಅಭ್ಯರ್ಥಿಯೆಂದು ಘೋಷಿಸಿದ್ದಾರೆ ಎಂದು ಟೀಕಿಸಿದರು. ಜೊತೆಗೆ, ತೊರನಹಳ್ಳಿ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಮಾಡಲಾಗಿದ್ದು, ಉಳಿದ ಕ್ಷೇತ್ರಗಳಿಗೆ ಯಾಕೆ ಘೋಷಣೆ ಮಾಡಿಲ್ಲ ಎಂಬ ಪ್ರಶ್ನೆ ಪರಿಶೀಲನೆಗೆ ತಂದುಕೊಟ್ಟರು.
ಕಾಂಗ್ರೆಸ್ ಪಕ್ಷದಲ್ಲಿ ಶಿಷ್ಠಾಚಾರ ಮತ್ತು ಕಾರ್ಯವಿಧಾನವನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಕಾಂಗ್ರೆಸ್ ಆಂತರಿಕ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸತೀಶ್ ರಾಜಣ್ಣ ಹೇಳಿದರು.
ಟೇಕಲ್ ಕ್ಷೇತ್ರಕ್ಕೆ ಸುನಿಲ್ ಗೌಡ ಅವರ ಹೆಸರನ್ನು ಘೋಷಿಸಿರುವುದಕ್ಕೆ ಕೆಪಿಸಿಸಿ ಅನುಮೋದನೆ ಇದೆಯೇ ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಅನುಮೋದನೆ ಇದ್ದರೆ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಬೇಕು, ಇಲ್ಲದಿದ್ದರೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಟಿಕೆಟ್ ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬೆದರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ರಾಜಣ್ಣ, ಇಂತಹ ಒತ್ತಡ ಹಾಗೂ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಾಲೂರು ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಟೀಕಿಸಿದರು.
ಶಾಸಕರಾದ ನಂತರ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಮಾಡಿರುವ ಅವರು, ಹೊಸ ಮತ್ತು ಹಳೆಯ ಕಾಂಗ್ರೆಸ್ಸಿಗರು ಎಂಬ ವಿಭಜನೆ ಸೃಷ್ಟಿಸಲಾಗಿದೆ ಎಂದು ಹೇಳಿದರು. ಇತರೆ ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದಿದ್ದರೂ, ತಾವು ಕಾಂಗ್ರೆಸ್ ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರ ಬೆಂಬಲಿಗರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
























